ಗಂಗಾವತಿ: ನಗರದ ಗಡಿ ಗ್ರಾಮಗಳನ್ನೊಳಗೊಂಡ ನಗರಸಭೆಯನ್ನು ಮೇಲ್ದರ್ಜೆಗೇರಿಸುವುದು ಸೂಕ್ತವಾಗಿದ್ದು, ಹಳ್ಳಿಗಳು ನಗರ ವ್ಯಾಪ್ತಿಗೆ ಬಂದರೆ ಸಮಗ್ರ ಅಭಿವೃದ್ಧಿಯಾಗಲಿವೆ ಎಂದು ಸುಗ್ರೀವಾ ಜನಸೇವಾ ಸಮಿತಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಸಂಗಮೇಶ ಸುಗ್ರೀವಾ ಹೇಳಿದರು.
ನಗರದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿ, ಅಭಿವೃದ್ಧಿ ಹಿತ ದೃಷ್ಟಿಯಿಂದ ನಗರಸಭೆಯನ್ನು ಗ್ರೇಡ್-1 ಮೇಲ್ದರ್ಜೆಗೇರಿಸುವುದು ವೈಜ್ಞಾನಿಕವಾಗಿದ್ದು, ಗಡಿಭಾಗದ ಗ್ರಾಮಗಳಾದ ಸಾಯಿ ನಗರ, ಹೊಸಳ್ಳಿ, ವಡ್ಡರಟ್ಟಿ , ವಡ್ಡರಹಟ್ಟಿ ಕ್ಯಾಂಪ್, ಜಂಗಮರ ಕಲ್ಲುಗುಡಿ ಮತ್ತು ಮರಳಿ ವ್ಯಾಪ್ತಿಯ ಹಳ್ಳಿಗಳಿಗೆ ಅನುಕೂಲವಾಗಲಿದೆ.
ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ಗ್ರಾಮಗಳು ನಗರಸಭೆ ವ್ಯಾಪ್ತಿಗೆ ಬಂದರೆ ಹೆಚ್ಚಿನ ಅನುದಾನ ದೊರೆಯಲಿದ್ದು, ಹಳ್ಳಿಯಿಂದ ಪಟ್ಟಣವಾಗಿ ಅಭಿವದ್ಧಿ ಹೊಂದುತ್ತವೆ. ಗ್ರಾಮೀಣ ಭಾಗದ 371 ಜೆ ವಿಧೇಯಕ ಹೊರತು ಉಳಿದಂತ ಎಲ್ಲ ಅಭಿವದ್ಧಿಯ ಚಟುವಟಿಕೆಗಳು ನಿರಾಂತಕವಾಗಿ ಸಾಗಲಿವೆ. ಕಂದಾಯ, ಶಿಕ್ಷಣ ಮತ್ತು ಉದ್ಯೋಗದಿಂದ ಅನುಕೂಲವಾಗಲಿದ್ದು, ಪ್ರತಿ ಗ್ರಾಮಗಳಿಗೂ ಅಭಿವೃದ್ಧಿ ಯೋಗ ಕೂಡಿಬರಲಿದೆ ಎಂದರು.
ಪಂಚಾಯತ್‌ರಾಜ್ ಇಲಾಖೆಯಿಂದ ಗ್ರಾಮಗಳಿಗೆ ಅನುದಾನ ಕಡಿಮೆಯಿದ್ದು, ನಗರಸಭೆಗೆ ವಿವಿಧ ಯೋಜನೆಗಳಿಂದ ಸಾಕಷ್ಟು ಅನುದಾನ ಹರಿದು ಬರಲಿದೆ. ಗ್ರಾಮಗಳಲ್ಲಿ ಕೊರತೆಯಿರುವ ರಸ್ತೆ, ಚರಂಡಿ ವ್ಯವಸ್ಥೆ ಸರಿಪಡಿಸಲು ನಗರಸಭೆ ವ್ಯಾಪ್ತಿಗೆ ಸೇರುವುದು ಸೂಕ್ತವಾಗಿದ್ದು, ಮೂಲ ಸೌಕರ್ಯದ ಕೊರತೆ ನೀಗಲಿದೆ ಎಂದರು.