ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಕಾಂಗ್ರೆಸ್ ಜಿಲ್ಲಾ ಸಮಿತಿ ಮಾಜಿ ಅಧ್ಯಕ್ಷೆ ಲಲಿತಾರಾಣಿ ರಾಯಲು, ಜಿಪಂ ಮಾಜಿ ಸದಸ್ಯ ಅಮರೇಶ ಗೋನಾಳ್, ನಗರಸಭೆ ಸದಸ್ಯ ಶಾಮೀದ್ ಮನಿಯಾರ್ ಇತರರಿದ್ದರು. 
ಜಿಲ್ಲೆ

ಬಿಜೆಪಿಗೆ ಅಧಿಕಾರದಲ್ಲಿರುವ ನೈತಿಕತೆಯಿಲ್ಲ - ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಆರೋಪ

ಗಂಗಾವತಿ: ಕಾಂಗ್ರೆಸ್ ಭರವಸೆಗಳನ್ನು ಆದ್ಯತೆ ಮೇರೆಗೆ ಈಡೇರಿಸುತ್ತದೆ. ಆದರೆ, ಜನಪರ ಕೆಲಸಗಳ ಬಗ್ಗೆ ವಿಳಂಬ ಧೋರಣೆ ಅನುಸರಿಸುತ್ತಿರುವ ಬಿಜೆಪಿಗೆ ಬದ್ಧತೆಯಿಲ್ಲ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದರು.

ತಾಲೂಕಿನ ಆನೆಗೊಂದಿಯಲ್ಲಿ ಕಾಂಗ್ರೆಸ್ ಗ್ರಾಮೀಣ ಘಟಕದಿಂದ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮದಲ್ಲಿ ಪುರಾತನ ಶಾಲೆಯ ಕಟ್ಟಡ ತೆರವುಗೊಳಿಸಿ ಶೌಚಗೃಹ ನಿರ್ಮಿಸುತ್ತಿರುವುದು ಬಿಜೆಪಿ ಸರ್ಕಾರದ ಶೈಕ್ಷಣಿಕ ಕಾಳಜಿ ತೋರಿಸುತ್ತದೆ. ಬದ್ಧತೆಯಿಲ್ಲದ ಬಿಜೆಪಿಗೆ ಅಧಿಕಾರದಲ್ಲಿರಲು ನೈತಿಕತೆಯಿಲ್ಲ. ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇಳಿಕೆಯಾಗಲಿದೆ ಎಂದರು.

ಗ್ರಾಮದ ಹೊರಭಾಗದಲ್ಲಿರುವ ಶ್ರೀಕೃಷ್ಣದೇವರಾಯ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ತೆರೆದ ವಾಹನದಲ್ಲಿ ವೇದಿಕೆವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಕಾಂಗ್ರೆಸ್ ಜಿಲ್ಲಾ ಸಮಿತಿ ಮಾಜಿ ಅಧ್ಯಕ್ಷೆ ಲಲಿತಾರಾಣಿ ರಾಯಲು, ಜಿಪಂ ಮಾಜಿ ಸದಸ್ಯ ಅಮರೇಶ ಗೋನಾಳ್, ತಾಪಂ ಮಾಜಿ ಸದಸ್ಯ ವೈ.ರಮೇಶ, ನಗರಸಭೆ ಸದಸ್ಯ ಶಾಮೀದ್ ಮನಿಯಾರ್, ಪ್ರಮುಖರಾದ ಎಂ.ಕೃಷ್ಣ, ವಿಷ್ಣುತೀರ್ಥ ಆದಾಪುರ, ಟಿ.ಜಿ.ಬಾಬು ಇತರರಿದ್ದರು.