ಪೊಲೀಸರ ಮೇಲೆ ಹಲ್ಲೆಗೈದ ಆರೋಪಿಗಳ ಗಡಿಪಾರಿಗೆ ಆಗ್ರಹಿಸಿ ಹಿಂದು ಜಾಗರಣಾ ವೇದಿಕೆ ತಾಲೂಕು ಸಮಿತಿ ಸದಸ್ಯರು ಗಂಗಾವತಿ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. 
ಜಿಲ್ಲೆ

ಪೊಲೀಸ್‌ರ ಮೇಲೆ ಹಲ್ಲೆಗೈದವರನ್ನು ಗಡಿಪಾರು ಮಾಡಿ

ಗಂಗಾವತಿ: ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಗಡಿಪಾರಿಗೆ ಒತ್ತಾಯಿಸಿ ಹಿಂದು ಜಾಗರಣಾ ವೇದಿಕೆ ತಾಲೂಕು ಸಮಿತಿ ಸದಸ್ಯರು ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ವೇದಿಕೆ ವಿಭಾಗೀಯ ಪ್ರಾಂತ ಸಂಚಾಲಕ ಶ್ರೀಕಾಂತ ಹೊಸ್ಕೇರಾ ಮಾತನಾಡಿ, ಕಾನೂನು ಮತ್ತು ಜನರನ್ನು ರಕ್ಷಿಸುತ್ತಿರುವ ಪೊಲೀಸರ ಮೇಲೆ ಮುಸ್ಲಿಂ ಗುಂಪೊಂದು ಹಲ್ಲೆ ನಡೆಸಿರುವುದು ಖಂಡನೀಯ. ಪೊಲೀಸರು ಕರ್ತವ್ಯ ನಿರ್ವಹಿಸುವುದು ಕಷ್ಟಕರವಾದ ವಾತಾವರಣ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಮರಸ್ಯತೆಯ ಕ್ಷೇತ್ರದಲ್ಲಿ ಮತಾಂಧರ ಗುಂಪು ಹಲ್ಲೆ, ದೌರ್ಜನ್ಯದಂಥ ಪ್ರಕರಣಗಳಿಗೆ ಕುಮ್ಮಕ್ಕು ನೀಡಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದೆ. ಗಾಂಜಾ, ಅಫೀಮು ಸೇರಿ ಡ್ರಗ್ಸ್ ಮಾರಾಟದ ಮೂಲಕ ಯುವಕರನ್ನು ದಾರಿ ತಪ್ಪಿಸುವ ಕೆಲಸವಾಗುತ್ತಿದೆ.

ಪೊಲೀಸರ ಮೇಲೆ ಹಲ್ಲೆ ನಡೆದರೂ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದಿರುವುದು ಅನುಮಾನಕ್ಕೆ ಕಾರಣವಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚಿ, ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು. ಉಪತಹಸೀಲ್ದಾರ್ ಮಂಜುನಾಥ ನಂದನ್‌ಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಸಹ ಸಂಚಾಲಕ ಎನ್. ಹನುಮಂತರೆಡ್ಡಿ ಗುಡೂರು, ವಿವಿಧ ಸಂಘಟನೆ ಪದಾಧಿಕಾರಿಗಳಾದ ಕುಮಾರ ಹೂಗಾರ್, ಅಯ್ಯನಗೌಡ ಹೇರೂರು, ಕೆ.ವೆಂಕಟೇಶ, ಶಿವಕುಮಾರ ಅರಿಕೇರಿ, ಸಂಗಮೇಶ ಅಯೋಧ್ಯಾ, ಮೌನೇಶ ಬಡಿಗೇರ್, ಕಾಶೀನಾಥ ಚಿತ್ರಗಾರ ಇತರರಿದ್ದರು.