ಜಿಲ್ಲೆ

ಪೌರಾಯುಕ್ತರ ಮೇಲೆ ಹಲ್ಲೆಗೆ ಯತ್ನ

ಕೆಪಿಸಿಸಿ ಉಪಾಧ್ಯಕ್ಷ ಬಂಧನಕ್ಕೆ ಹೈದ್ರಾಬಾದ್ ಕರ್ನಾಟಕ ಪ್ರದೇಶ ಪೌರ ಸೇವಾ ನೌಕರರ ಸಂಘ ಆಗ್ರಹ

ಗಂಗಾವತಿ: ಕರ್ತವ್ಯಕ್ಕೆ ಅಡ್ಡಿಪಡಿಸಿ ಪೌರಾಯುಕ್ತರ ಮೇಲೆ ಹಲ್ಲೆಗೆ ಯತ್ನಿಸಿದ ಕೆಪಿಸಿಸಿ ಉಪಾಧ್ಯಕ್ಷ ಶಂಕರರಾವ್ ಉಂಡಾಳೆ ಬಂಧನಕ್ಕೆ ಒತ್ತಾಯಿಸಿ ಹೈದ್ರಾಬಾದ್ ಕರ್ನಾಟಕ ಪ್ರದೇಶ ಪೌರ ಸೇವಾ ನೌಕರರ ಸಂಘದ ಸದಸ್ಯರು ನಗರಸಭೆ ಮುಂದೆ ಬುಧವಾರ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ಮಂಜುನಾಥ ನಂದನ್‌ಗೆ ಮನವಿ ಸಲ್ಲಿಸಿದರು.

ಪ್ರತಿಭಟನೆ ನೇತೃತ್ವವಹಿಸಿದ್ದ ಸಂಘದ ಅಧ್ಯಕ್ಷ ರಮೇಶ ತಿಮ್ಮಪ್ಪ ಮಾತನಾಡಿ, ಮಳೆ ಹಾನಿ ಪ್ರದೇಶ ವೀಕ್ಷಣೆಯಲ್ಲಿ ನಿರತರಾಗಿದ್ದ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಅವರನ್ನು ಶಂಕರರಾವ್ ಉಂಡಾಳೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಅಧಿಕಾರಿಗಳಿಗೆ ತೊಂದರೆ ಕೊಟ್ಟು ಸಿಬ್ಬಂದಿ ಕರ್ತವ್ಯಕ್ಕೂ ಅಡ್ಡಿಪಡಿಸುವ ಸಾಧ್ಯತೆಗಳಿವೆ. ಹೀಗಾಗಿ ಕೂಡಲೇ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ನೌಕರರಿಗೆ ಭದ್ರತೆ ಒದಗಿಸಬೇಕು. ನಿರ್ಲಕ್ಷಿಸಿದರೆ ಹೋರಾಟ ತೀವ್ರಗೊಳಿಸುವುದಾಗಿ ತಿಳಿಸಿದರು.