ಗಂಗಾವತಿ: ತಾಲೂಕಿನ ಹನುಮನಹಳ್ಳಿಯ ಅಂಜನಾದ್ರಿ ಬೆಟ್ಟದಲ್ಲಿ ಪ್ರಧಾನ ಅರ್ಚಕ ವಿದ್ಯಾದಾಸ ಬಾಬಾಗೆ ಪೂರ್ಣ ಪ್ರಮಾಣದಲ್ಲಿ ಅಧಿಕಾರ ನೀಡುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪ್ರೊ.ಕೃಷ್ಣಪ್ಪ ಬಣದ ಸದಸ್ಯರು ನಗರದ ತಾಲೂಕಾಡಳಿತ ಸೌಧದ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಯು.ನಾಗರಾಜ್‌ಗೆ ಮನವಿ ಸಲ್ಲಿಸಿದರು.
ಸಮಿತಿ ಕಲ್ಯಾಣ ಕರ್ನಾಟಕ ವಿಭಾಗೀಯ ಸಂಚಾಲಕ ಜಿ.ಹಂಪೇಶ ಹರಿಗೋಲು ಮಾತನಾಡಿ, ಐತಿಹಾಸಿಕ ಅಂಜನಾದ್ರಿ ಬೆಟ್ಟದ ದೇವಾಲಯದಲ್ಲಿ ವಿದ್ಯಾದಾಸ ಬಾಬಾ ಪರಂಪರೆಯಿಂದ ಪೂಜೆ ನಡೆಸಿಕೊಂಡು ಬರುತ್ತಿದ್ದು, ದೇವಾಲಯ ಮುಜರಾಯಿ ಇಲಾಖೆಗೆ ಸೇರ್ಪಡೆಯಾದ ನಂತರ ತಡೆ ಹಿಡಿಯಲಾಗಿತ್ತು.
ಪೂಜೆ ಹಕ್ಕನ್ನು ವಿದ್ಯಾದಾಸ ಬಾಬಾಗೆ ಸುಪ್ರೀಂಕೋರ್ಟ್ ಪುರಸ್ಕರಿಸಿದ್ದು, ಆದೇಶ ಪಾಲಿಸಬೇಕಾದ ದೇವಾಲಯ ನಿರ್ವಹಣೆ ಅಧಿಕಾರಿಗಳು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ಸುಪ್ರೀಂಕೋರ್ಟ್ ತೀರ್ಪಿನಂತೆ ಎಲ್ಲ ಹಕ್ಕುಗಳನ್ನು ವಿದ್ಯಾದಾಸ ಬಾಬಾಗೆ ನೀಡಬೇಕಿದ್ದು, ಯಾವುದೇ ಕಾರಣಕ್ಕೂ ಅಡ್ಡಿಪಡಿಸುವಂತಿಲ್ಲ. ಅಭಿವೃದ್ಧಿ ಪರ ಯೋಜನೆಗಳನ್ನು ಹಾಕಿಕೊಂಡಿರುವ ವಿದ್ಯಾದಾಸ ಬಾಬಾಗೆ ಮುಜರಾಯಿ ಇಲಾಖೆ ಸಹಕರಿಸುವಂತೆ ಒತ್ತಾಯಿಸಿದರು.
ಪದಾಧಿಕಾರಿಗಳಾದ ಹನುಮಂತಪ್ಪ ಹ್ಯಾಟಿ, ಜಂಬಣ್ಣ ಸಿಂಗ್ರಿ, ಯಮನೂರಪ್ಪ ನಾಯಕ ಹುಲಿಹೈದರ್, ಬೆಟ್ಟಪ್ಪ ಹಿರೇಕುರುಬರ್, ಗೋವಿಂದಪ್ಪ ಇತರರಿದ್ದರು.