ಗಂಗಾವತಿ: ಸಾಂಸ್ಕೃತಿಕ ನಾಯಕ ಬಸವಣ್ಣನವರ ಚಿಂತನೆಗಳು ಸರ್ವಕಾಲಿಕ ಮಾನ್ಯತೆ ಪಡೆದಿದ್ದು, ವಚನ ಸಾಹಿತ್ಯದ ಸಾರ ಪ್ರತಿಯೊಬ್ಬರು ಅರಿಯಬೇಕಿದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ನಗರದ ಬಸ್‌ನಿಲ್ದಾಣದ ಶ್ರೀ ಬಸವೇಶ್ವರ ಮೂರ್ತಿ ಮುಂಭಾಗದಲ್ಲಿ ಶ್ರೀ ಬಸವೇಶ್ವರ ಟ್ರಸ್ಟ್ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಷ್ಠಾಪನೆ ವರ್ಷದ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾನತೆ ಬಗ್ಗೆ 12ನೇ ಶತಮಾನದಲ್ಲಿ ಬಸವಣ್ಣನವರು ಸಮರ ಸಾರಿದ್ದು, ಎಲ್ಲ ವರ್ಗದವರನ್ನೂ ಒಗ್ಗೂಡಿಸಿದ್ದರು ಎಂದರು.
ಟ್ರಸ್ಟ್ ಉಪಾಧ್ಯಕ್ಷ ಡಾ.ಶಿವಕುಮಾರ ಮಾಲಿ ಪಾಟೀಲ್, ಸಾಂಸ್ಕೃತಿಕ ನಾಯಕ ಎಂದು ೋಷಿಸಿದ ವರ್ಷವೇ ನಗರದಲ್ಲಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಮುಂಬರುವ ದಿನಗಳಲ್ಲಿ ವಚನಸಾರದ ಕುರಿತು ವಿಭಿನ್ನ ಚಟುವಟಿಕೆ ಹಮ್ಮಿಕೊಳ್ಳಲಾಗುವುದು ಎಂದರು.
ಮಾಜಿ ಸಂಸದ ಎಸ್.ಶಿವರಾಮನಗೌಡ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಕಳಕನಗೌಡ ಜಮಾಪುರ, ಹಿರಿಯ ವೈದ್ಯೆ ಸುಲೋಚನಾ ಚಿನಿವಾಲರ್, ಮುಖಂಡರಾದ ಬಸವರಾಜ ದೇಸಾಯಿ, ದಿಲೀಪ್ ವಂದಾಲ್, ನಿಜಲಿಂಗಪ್ಪ ಮೆಣಸಿಗೆ, ಆನಂದ ಅಕ್ಕಿ, ಅಮರೇಗೌಡ, ವೀರೇಶರೆಡ್ಡಿ, ಶ್ರವಣಕುಮಾರ ರಾಯ್ಕರ್, ಸರಿಗಮ ಹನುಮಂತಪ್ಪ ಇತರರಿದ್ದರು. ಸಂಗೀತ ಪಾಠಶಾಲೆ ವಿದ್ಯಾರ್ಥಿಗಳಿಂದ ವಚನ ಗಾಯನ ಹಮ್ಮಿಕೊಳ್ಳಲಾಗಿತ್ತು.