ಜಿಲ್ಲೆ

ವಿವಿಗಳ ರದ್ದತಿಯಿಂದ ಶಿಕ್ಷಣದ ಮೇಲೆ ಪರಿಣಾಮ

ಗಂಗಾವತಿ: ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದ ವಿವಿಗಳನ್ನು ರದ್ದುಪಡಿಸದಂತೆ ಒತ್ತಾಯಿಸಿ ಯುವ ಉತ್ತೇಜನಾ ಸೇನಾ ಪಡೆ ತಾಲೂಕು ಸಮಿತಿ ಸದಸ್ಯರು ನಗರದ ತಾಲೂಕಾಡಳಿತ ಸೌಧದ ಕಚೇರಿ ಮುಂಭಾಗ ಬುಧವಾರ ಪ್ರತಿಭಟಿಸಿದರು.

ಪಡೆಯ ಜಿಲ್ಲಾಧ್ಯಕ್ಷ ಸರ್ವಜ್ಞಮೂರ್ತಿ ಮಾತನಾಡಿ, ಶೈಕ್ಷಣಿಕ ಬೆಳವಣಿಗೆಗೆ ಹಿನ್ನೆಲೆಯಲ್ಲಿ ಹಿಂದಿನ ಸರ್ಕಾರ ರಾಜ್ಯದಲ್ಲಿ 9 ವಿವಿಗಳನ್ನು ಅಸ್ತಿತ್ವಕ್ಕೆ ತಂದಿತ್ತು. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು. ಅಲ್ಲದೆ ಪದವಿ ಮತ್ತು ಸ್ನಾತಕೋತ್ತರ ಪದವಿ ಆಡಳಿತ ವಿಸ್ತಾರಕ್ಕೆ ಸಹಾಯವಾಗಿತ್ತು. ವಿದ್ಯಾರ್ಥಿಗಳ ಜತೆಗೆ ಉಪನ್ಯಾಸಕರು ಮತ್ತು ಪ್ರಗತಿಚಿಂತಕರಿಗೂ ವಿವಿ ವೇದಿಕೆಯಾಗಿತ್ತು. ವಿವಿಗಳನ್ನು ರದ್ದುಪಡಿಸುವುದರಿಂದ ಶಿಕ್ಷಣದ ಮೇಲೆ ಪರಿಣಾಮ ಬೀರಲಿದ್ದು, ನಿರುದ್ಯೋಗ ಸಮಸ್ಯೆಯೂ ಹೆಚ್ಚಾಗಲಿದೆ. ಕೂಡಲೇ ರದ್ದುಪಡಿಸುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯುವಂತೆ ಒತ್ತಾಯಿಸಿದರು. ಉಪತಹಸೀಲ್ದಾರ್ ಪ್ರಕಾಶ ನಾಯಕ್‌ರಿಗೆ ಮನವಿ ಸಲ್ಲಿಸಿದರು. ಪದಾಧಿಕಾರಿಗಳಾದ ಕೌಸ್ತುಬ್ ದಂಡಿನ್, ಕಲ್ಲೇಶ, ಉಮೇಶ, ಭೂಮಿಕಾ, ಆಂಜನೇಯ, ಗಾಳೇಶ ಇತರರಿದ್ದರು.