ಗಂಗಾವತಿ: ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳೊಂದಿಗೆ ಸಮಾಜಮುಖಿ ಚಟುವಟಿಕೆ ಹಮ್ಮಿಕೊಳ್ಳಲಾಗುತ್ತಿದ್ದು, ಶೈಕ್ಷಣಾಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದು ಶ್ರೀ ಶೃಂಗೇರಿ ಶಂಕರ ಮಠದ ಸ್ಥಳೀಯ ಶಾಖೆ ಧರ್ಮಾಧಿಕಾರಿ ನಾರಾಯಣರಾವ್ ವೈದ್ಯ ಹೇಳಿದರು.
ನಗರದ ಶಾರದಾಂಬೆ ಕಲ್ಯಾಣ ಮಂಟಪದಲ್ಲಿ ಶೃಂಗೇರಿ ಪೀಠದ ಕಿರಿಯ ಶ್ರೀಗಳ ವಿಜಯಯಾತ್ರೆ ಕಾರ್ಯಕ್ರಮ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿಸಭೆಯಲ್ಲಿ ಮಾತನಾಡಿದರು. ದಕ್ಷಿಣಮ್ನಾಯ ಶ್ರೀ ಶಂಕರಾಚಾರ್ಯರ ಮಹಾಸಂಸ್ಥಾನದ ಶಾರದಾ ಪೀಠದ ಉಭಯಶ್ರೀಗಳ ಅನುಗ್ರಹದೊಂದಿಗೆ ನಗರದಲ್ಲಿ ದೇವಾಲಯ, ಕಲ್ಯಾಣ ಮಂಟಪ ಮತ್ತು ಸಭಾಭವನ ನಿರ್ಮಿಸಲಾಗಿದ್ದು, ನಿರಂತರ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಬಡ ಮಕ್ಕಳ ಶುಲ್ಕ ಭರಿಸುವುದು, ಸ್ವಾವಲಂಬಿಗಳಿಗಾಗಿ ಯಂತ್ರಗಳ ವಿತರಣೆ, ಮಾಂಗಲ್ಯ ಭಾಗ್ಯ ಸೇರಿ ವಿವಿಧ ಚಟುವಟಿಕೆಗಳು ನಿರಂತರವಾಗಿವೆ. ಶ್ರೀಮಠದ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರು ಸನ್ಯಾಸ ಸ್ವೀಕರಿಸಿದ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ಕಿರಿಯ ಶ್ರೀಗಳು ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಲೋಕಕಲ್ಯಾಣಾರ್ಥ ವಿಶೇಷ ಪೂಜೆ ನಿರಂತರವಾಗಿವೆ. ಕಿರಿಯ ಶ್ರೀಗಳಾದ ಶ್ರೀವಿಧುಶೇಖರ ಭಾರತೀ ಸ್ವಾಮೀಜಿ, ವಿಜಯಯಾತ್ರೆ ಭಾಗವಾಗಿ ಜ.21 ಮತ್ತು 22ರಂದು ಗಂಗಾವತಿಗೆ ಆಗಮಿಸಲಿದ್ದಾರೆ.
ಜ.21ರಂದು ಶ್ರೀಗಳ ಪುರಪ್ರವೇಶ, ಪೂರ್ಣಕುಂಭದೊಂದಿಗೆ ಸ್ವಾಗತ, ಶೋಭಾಯಾತ್ರೆ, ಶಂಕರಮಠದಲ್ಲಿ ಧೂಳಿ ಪಾದಪಾಜೆ, ನವೀಕೃತ ಸಭಾಂಗಣ ಉದ್ಘಾಟನೆ, ಶ್ರೀಗಳಿಗೆ ಲಸಮರ್ಪಣೆ, ಆಶೀರ್ವಚನ ಮತ್ತು ಶ್ರೀ ಚಂದ್ರಮೌಳೀಶ್ವರ ಪೂಜೆ ಜರುಗಲಿವೆ. ಜ.22ರಂದು ಶ್ರೀ ಮಠದ ಅರ್ಚಕರಿಂದ ವಿಶೇಷ ಪೂಜೆ, ಶ್ರೀಗಳ ದರ್ಶನ, ಭಕ್ತರಿಂದ ಪಾದಪೂಜೆ, ಭಿಕ್ಷಾ, ವಂದನೆ, ಲಮಂತ್ರಾಕ್ಷತೆ ಮತ್ತು ತೀರ್ಥ ಪ್ರಸಾದ ವಿತರಣೆ ಜರುಗಲಿದೆ ಎಂದರು.
ಬ್ರಾಹ್ಮಣ ಸಮಾಜದ ಮುಖಂಡರಾದ ಸುದರ್ಶನ ಜೋಶಿ, ರಾಘವೇಂದ್ರ ಮೇಗೂರು, ತಿರುಮಲರಾವ್ ಆಲ್ಲಂಪಲ್ಲಿ, ಜಗನ್ನಾಥ ಅಳವಂಡಿಕರ್, ಮುರಳೀಧರ ಕುಲ್ಕರ್ಣಿ, ಶ್ರೀಪಾದ ಮುಧೋಳಕರ್, ಬದರಿನಾಥ ಜೋಶಿ ಇತರರಿದ್ದರು.