ಜಿಲ್ಲೆ

ಅನಧಿಕೃತ ವಾಸ, ಅಧಿಕೃತ ನೋಟಿಸ್

ನೀರಾವರಿ ಇಲಾಖೆಯ ವಡ್ಡರಹಟ್ಟಿ ವಸತಿಗೃಹಗಳು | ಸಿಬ್ಬಂದಿಗಿಂತ ಇತರರೇ ವಾಸ್ತವ್ಯ

ಗಂಗಾವತಿ: ತಾಲೂಕಿನ ವಡ್ಡರಹಟ್ಟಿ ಕ್ಯಾಂಪ್‌ನ ನೀರಾವರಿ ಇಲಾಖೆಗೆ ಒಳಪಡುವ ವಸತಿ ಗೃಹಗಳಲ್ಲಿ ಅನಧಿಕೃತ ವಾಸ ಇರುವವರನ್ನು ತೆರವುಗೊಳಿಸುವಂತೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.

ತುಂಗಭದ್ರಾ ಜಲಾಶಯ ವ್ಯಾಪ್ತಿ ಎಡದಂಡೆ ಕಾಲುವೆ ನಿರ್ಮಾಣ ಸಂದರ್ಭ ಖಾಸಗಿ ಒಡೆತನದ ಭೂಮಿಯನ್ನು ನೀರಾವರಿ ಇಲಾಖೆ ಖರೀದಿಸಿ, ಇಲಾಖೆ ಕಚೇರಿ ಸೇರಿ 125 ಮನೆ ನಿರ್ಮಿಸಲಾಗಿದೆ. ಸಿಬ್ಬಂದಿ ವಾಸಕ್ಕಿರುವ ಮನೆಗಳಲ್ಲಿ ನಿವೃತ್ತರು ಮತ್ತು ಖಾಸಗಿಯವರು ವಾಸಿಸುತ್ತಿದ್ದಾರೆ. ಹಲವು ವರ್ಷಗಳಿಂದ ನಿರ್ವಹಣೆಗೆ ಸರ್ಕಾರಿ ಹಣವನ್ನೇ ಬಳಸಲಾಗಿದೆ.

ಇತ್ತೀಚೆಗೆ ಸಿಬ್ಬಂದಿ ಸಂಖ್ಯೆ ಹೆಚ್ಚಿದ್ದು, ವಾಸಕ್ಕೆ ವಸತಿ ಗೃಹಗಳಿಲ್ಲ. ಶೇ.15ರಷ್ಟು ಸಿಬ್ಬಂದಿಗೆ ಮಾತ್ರ ಮನೆ ದೊರೆತಿದೆ. ವಸತಿ ಗೃಹ ಹಿನ್ನೆಲೆಯಲ್ಲಿ ಎಚ್‌ಆರ್‌ಎ ದೊರೆಯುತ್ತಿಲ್ಲ. ಹೀಗಾಗಿ ಅನಧಿಕೃತವಾಗಿ ವಾಸಿಸುತ್ತಿರುವ ಕುಟುಂಬಗಳಿಗೆ ನೋಟಿಸ್ ಜಾರಿ ಮಾಡಿದ್ದು, ವಾಸಿತರು ಇದುವರೆಗೂ ಉತ್ತರ ನೀಡಿಲ್ಲ. ಹಳೆಯದಾದ ವಸತಿ ಗೃಹಗಳಲ್ಲಿರುವ ನಿವಾಸಿಗಳು ಸ್ವಂತ ಮನೆಯಂತೆ ದುರಸ್ತಿ ಮಾಡಿಸಿದ್ದು, ಕೆಲವರು ನವೀಕರಣವೂ ಮಾಡಿದ್ದಾರೆ.

ಸರ್ಕಾರಿ ಆಸ್ತಿ ಉಳಿಸುವ ನಿಟ್ಟಿನಲ್ಲಿ ನೀರಾವರಿ ಅಧಿಕಾರಿಗಳು ಮನೆ ತೆರವುಗೊಳಿಸುವಂತೆ ನೋಟಿಸ್ ಜಾರಿ ಮಾಡಿದ್ದಾರೆ ಎನ್ನಲಾಗಿದೆ. ಸರ್ಕಾರಿ ವಸತಿ ಗೃಹದಲ್ಲಿ ವಾಸಿಸುವ ನಿವಾಸಿಗಳ ಹಿಂದೆ ಪ್ರಭಾವಿಗಳಿದ್ದು, ಕೆಲ ಅಧಿಕಾರಿಗಳೇ ರಕ್ಷಣೆಗಿದ್ದಾರೆ. ಹೀಗಾಗಿ ನೋಟಿಸ್ ಜಾರಿ ಮಾಡಿದರೂ ನಿವಾಸಿಗಳಿಂದ ಉತ್ತರ ಬಂದಿಲ್ಲ. ಹಾನಿಗೊಳಗಾದ ಸಂದರ್ಭ ಸರ್ಕಾರದ ಖರ್ಚಿನಲ್ಲಿ ದುರಸ್ತಿ ಕೈಗೊಳ್ಳುವಂತೆ ಒತ್ತಾಯಿಸಿದ ಪ್ರಸಂಗವೂ ನಡೆದಿದೆ.

‘ಇಲಾಖೆ ವಸತಿ ಗೃಹದಲ್ಲಿ ಅನ್ಯರು ವಾಸಿಸುತ್ತಿದ್ದು, ಹಲವು ಬಾರಿ ತಿಳಿವಳಿಕೆ ಮೂಡಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಈ ಬಾರಿ ಸಾಮೂಹಿಕವಾಗಿ ನೋಟಿಸ್ ಜಾರಿ ಮಾಡಲಾಗಿದೆ. ಸ್ಪಂದಿಸದಿದ್ದರೆ ಮೇಲಧಿಕಾರಿಗಳ ಗಮನಕ್ಕೆ ತಂದು ಕಾನೂನು ಕ್ರಮಕ್ಕೆ ಶಿಾರಸು ಮಾಡಲಾಗುವುದು’ ಎನ್ನುತ್ತಾರೆ ನೀರಾವರಿ ಇಲಾಖೆ ಎಇಇ ರಾಜೇಶ ವಸ್ತ್ರದ.

ವಸತಿ ಗೃಹಗಳು ಖಾಸಗಿ ಪಾಲಾಗಿದ್ದು, ಸ್ವಚ್ಛತೆಯಿಲ್ಲದಂತಾಗಿದೆ. ಎಲ್ಲೆಂದರಲ್ಲಿ ಕೊಳಚೆ ನೀರು, ತ್ಯಾಜ್ಯ ಸಂಗ್ರಹವಾಗುತ್ತಿದ್ದರೂ ನಿವಾಸಿಗಳು ಗಂಭೀರವಾಗಿ ಪರಿಗಣಿಸಿಲ್ಲ. ಎಲ್ಲ ಮನೆಗಳ ತೆರವಿಗೆ ವಾಸಿತರಿಗೆ ನೋಟಿಸ್ ಜಾರಿ ಮಾಡಲಾಗಿದೆ.| ರಾಜೇಶ ವಸದ್, ಎಇಇ, ಜಲಸಂಪನ್ಮೂ ಇಲಾಖೆ, ವಡ್ಡರಹಟ್ಟಿ ವಿಭಾಗ.