ಅನಧಿಕೃತ ಕಸಾಯಿಖಾನೆಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಹಿಂದು ಜಾಗರಣೆ ವೇದಿಕೆ ತಾಲೂಕು ಘಟಕದ ಸದಸ್ಯರು ಗಂಗಾವತಿ ನಗರಸಭೆ ಪೌರಾಯುಕ್ತ ಅರವಿಂದ ಜಮಖಂಡಿಗೆ ಸೋಮವಾರ ಮನವಿ ಸಲ್ಲಿಸಿದರು. 
ಜಿಲ್ಲೆ

ಅನಧಿಕೃತ ಕಸಾಯಿಖಾನೆ ತೆರವುಗೊಳಿಸಲು ಹಿಂದು ಜಾಗರಣೆ ವೇದಿಕೆ ಪ್ರತಿಭಟನೆ

ಗಂಗಾವತಿ: ನಗರದಲ್ಲಿರುವ ಅನಧಿಕೃತ ಕಸಾಯಿಖಾನೆಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಹಿಂದು ಜಾಗರಣೆ ವೇದಿಕೆ ತಾಲೂಕು ಘಟಕದ ಸದಸ್ಯರು ನಗರದ ನಗರಸಭೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾ ಸಂಚಾಲಕ ಶ್ರೀಕಾಂತ ಹೊಸ್ಕೇರಿ ಮಾತನಾಡಿ, ರಾಜ್ಯ ಸರ್ಕಾರ ಜಾರಿಗೆ ತಂದ ಗೋ ಹತ್ಯೆ ನಿಷೇಧ ಕಾಯ್ದೆ ನಗರದಲ್ಲಿ ಉಲ್ಲಂಘನೆಯಾಗುತ್ತಿದ್ದು, ಎಲ್ಲೆಂದರಲ್ಲಿ ಕಸಾಯಿಖಾನೆ ನಿರ್ಮಾಣವಾಗಿವೆ. ಅನಧಿಕೃತ ಕಸಾಯಿಖಾನೆ ತೆರವಿಗಾಗಿ ಎರಡು ವರ್ಷಗಳಿಂದ ಒತ್ತಾಯಿಸುತ್ತಿದ್ದರೂ ಇದುವರೆಗೂ ತೆರವಾಗಿಲ್ಲ. ಇತ್ತೀಚಿಗೆ ಅನಧಿಕೃತ ಕಸಾಯಿಖಾನೆ ಮೇಲೆ ದಾಳಿ ನಡೆಸಿದಾಗ 30ಕ್ಕೂ ಹೆಚ್ಚು ಜಾನುವಾರುಗಳು ಪತ್ತೆಯಾಗಿವೆ. ಅನಧಿಕೃತ ಕಸಾಯಿಖಾನೆಗಳಿದ್ದರೆ ಕಾಯ್ದೆ ಅನ್ವಯ ಆಸ್ತಿ ಮುಟ್ಟಗೋಲು ಹಾಕಲು ಅವಕಾಶವಿದ್ದರೂ ನಗರಸಭೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆರೋಪಿಸಿದರು.

ಪದಾಧಿಕಾರಿಗಳಾದ ಅಯ್ಯನಗೌಡ ಹೇರೂರು, ನೀಲಕಂಠಪ್ಪ ನಾಗಶೆಟ್ಟಿ, ನಾಗರಾಜ್ ಚಳಗೇರಿ, ರವೀಂದ್ರ ಹೂಲಗೇರಿ, ಹನುಮಂತರೆಡ್ಡಿ ಗೂಡೂರು, ಕುಮಾರ ಹೂಗಾರ್, ಸಂಗಮೇಶ ಅಯೋಧ್ಯಾ, ಚಂದ್ರು ಹಿರೇಮಠ ಇತರರಿದ್ದರು.