ಗಂಗಾವತಿ: ಪೊಲೀಸ್ ಮತ್ತು ಅಬಕಾರಿ ಅಧಿಕಾರಿಗಳ ತಾತ್ಸಾರದಿಂದ ಗಂಗಾವತಿ ಕ್ಷೇತ್ರ ಡ್ರಗ್ಸ್ ಹಬ್ ಆಗುತ್ತಿದೆ. ನಿಯಂತ್ರಿಸದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಶಾಸಕ ಗಾಲಿ ಜನಾರ್ದನ ರೆಡ್ಡಿಎಚ್ಚರಿಸಿದರು.
ನಗರದ ತಾಪಂ ಮಂಥನ ಸಭಾಂಗಣದಲ್ಲಿ ಸೋಮವಾರ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದರು. ಕಿಷ್ಕಿಂಧಾ ಕ್ಷೇತ್ರಕ್ಕೆ ಕೆಟ್ಟ ಹೆಸರು ಬರುವ ನಿಟ್ಟಿನಲ್ಲಿ ಕೆಲ ಶಕ್ತಿಗಳು ಮುಂದಾಗಿವೆ. ಇದಕ್ಕೆ ಅಧಿಕಾರಿಗಳ ಕುಮ್ಮಕ್ಕೂ ಇದೆ. ಗಾಂಜಾ ಸೇವನೆ-ಮಾರಾಟ ಕಂಡು ಬಂದರೂ ಕ್ರಮವಾಗಿಲ್ಲ. ಡ್ರಗ್ಸ್ ಬಳಕೆ ಕುರಿತು ಸದನದಲ್ಲಿ ಚರ್ಚೆಯಾಗಿದೆ. ಕ್ಷೇತ್ರದ ಮರ್ಯಾದೆ ಹೋಗಿದೆ. ಡ್ರಗ್ಸ್ ನಿಯಂತ್ರಣಕ್ಕಾಗಿ ಬೃಹತ್ ಅಭಿಯಾನ ಹಮ್ಮಿಕೊಳ್ಳಲಾಗುವುದು. ಕೊಪ್ಪಳ ಕ್ಷೇತ್ರದಲ್ಲಿ ನಡೆದ ಹೈಡ್ರೋ ಗಾಂಜಾ ಪ್ರಕರಣ ಗಂಗಾವತಿಯಲ್ಲಿ ನಡೆದಂತೆ ದಾಖಲಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಕುಮ್ಮಕ್ಕು ನೀಡುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಸದನಕ್ಕೆಳೆಯುತ್ತೇನೆ ಎಂದು ಶಾಸಕ ಹೇಳಿದರು.
ಭೂಕಬಳಿಕೆ ಬಗ್ಗೆ ಮಾಹಿತಿಯಿದ್ದು, ವಡ್ಡರಹಟ್ಟಿ ಕ್ಯಾಂಪ್‌ನ ನೀರಾವರಿ ಇಲಾಖೆ 108 ಎಕರೆ ದಾಖಲೆಗಳು ಇಲಾಖೆಯಲ್ಲಿಲ್ಲ. ಸಿದ್ದಿಕೇರಿ ಕ್ಯಾಂಪ್‌ನ 18 ಎಕರೆ ಕೆರೆ ಮತ್ತು ಉಳಿದ ಜಾಗದ ದಾಖಲೆಗಳಿಲ್ಲ. ಕಂದಾಯ, ಸರ್ವೇ ಮತ್ತು ಸಂಬಂಧಿತ ಅಧಿಕಾರಿಗಳು ಸರ್ವೇ ನಡೆಸಿ ಸರ್ಕಾರಿ ಜಾಗ ಉಳಿಸಬೇಕು. ನಿರ್ಲಕ್ಷಿಸಿದರೆ ಅಧಿಕಾರಿಗಳೇ ಹೊಣೆ. ಒತ್ತುವರಿದಾರರಿಗೆ ನೋಟಿಸ್ ಜಾರಿ ಮಾಡಬೇಕು. ನಗರ ವ್ಯಾಪ್ತಿಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಗುರುತಿಸಿರುವ 45 ಖಾಲಿ ಜಾಗವನ್ನು ಸಿಡಿಪಿಒಗೆ ಹಸ್ತಾಂತರಿಸಬೇಕು. ಎಲ್‌ಕೆಜಿಯಿಂದ ಪಿಯುವರೆಗಿನ ವಸತಿ ಶಾಲೆಗೆ ಸರ್ಕಾರಿ ಜಾಗೆ ಗುರುತಿಸುವಂತೆ ಅಲ್ಪಸಂಖ್ಯಾತ ಮತ್ತು ಕಂದಾಯ ಅಧಿಕಾರಿಗಳಿಗೆ ಶಾಸಕ ಸೂಚಿಸಿದರು.
ಇರಕಲ್‌ಗಡಾ ಮತ್ತು ವೆಂಕಟಗಿರಿಗೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಇಲಾಖೆಯಿಂದ ಗ್ರೀನ್ ಸಿಗ್ನಲ್ ಸಿಕ್ಕರೂ ಜಿಲ್ಲಾ ಉಸ್ತುವಾರಿ ಸಚಿವರ ಕೈವಾಡದಿಂದ ವೆಂಕಟಗಿರಿಯನ್ನು ಕೈಬಿಟ್ಟರೆ, ಇರಕಲ್‌ಗಡಾಕ್ಕೆ ಅನುದಾನ ಮಂಜೂರು ಮಾಡಿಲ್ಲ. ವನಜೀವಿನ ಸಂರಕ್ಷಣಾ ಯೋಜನೆಗೆ ಪ್ರತ್ಯೇಕ ಜಾಗ ಗುರುತಿಸುವ ಕೆಲಸ ಅರಣ್ಯ ಅಧಿಕಾರಿಗಳು ಕೈಗೊಳ್ಳಬೇಕಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯಾಧಿಕಾರಿಗಳಾದ ಸುಭಾಷಚಂದ್ರ ನಾಯಕ ಮತ್ತು ಪುಷ್ಪಾ ಅವರು, ಸಾರ್ವಜನಿಕ ಸಹಭಾಗಿತ್ವದಲ್ಲಿ ಯೋಜನೆ ರೂಪಿಸಲಾಗುತ್ತಿದ್ದು, ಪ್ರಸ್ತಾವನೆ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದರು.
ನಗರದ ಪ್ರಮುಖ ರಸ್ತೆಗಳು ಹಾಳಾಗಿದ್ದು, ರಸ್ತೆ ವಿಸ್ತರಣೆ ಜತೆಗೆ ಶಾಶ್ವತ ಅಭಿಯಾಗಬೇಕು. ಗ್ರಾಮೀಣ ಸಂಪರ್ಕದ ರಸ್ತೆ ಅಭಿವೃದ್ಧಿಗೆ ಗಮನಹರಿಸುವಂತೆ ಅಧಿಕಾರಿಗಳಿಗೆ ಶಾಸಕ ಸೂಚಿಸಿದರು. ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಮಾತನಾಡಿ, ತಾತ್ಕಾಲಿಕ ದುರಸ್ತಿಗೆ (ಮರುಹೊದಿಕೆ) ಐದು ಕೋಟಿ ರೂ., ಶಾಶ್ವತ ದುರಸ್ತಿಗೆ 16 ಕೋಟಿ ರೂ.ಗಳ ಅಗತ್ಯವಿದೆ. ಲೋಕೋಪಯೋಗಿ ಇಲಾಖೆ ಎಇಇ ಜೆ.ವಿಶ್ವನಾಥ ಪ್ರತಿಕ್ರಿಯಿಸಿ, ಇಲಾಖೆಯ 50:54 ಯೋಜನೆಯಡಿ 50 ಕೋಟಿ ರೂ. ಮಂಜೂರಾಗಿದ್ದು, 37.50 ಕೋಟಿ ರೂ.ಗಳನ್ನು ಗ್ರಾಮೀಣ ಭಾಗದ ರಸ್ತೆ ಮತ್ತು 12.50 ಕೋಟಿ ರೂ.ಗಳನ್ನು ನಗರದ ರಸ್ತೆಗಳ ಅಭಿವೃದ್ಧಿಗೆ ಬಳಸಲು ಅವಕಾಶವಿದೆ ಎಂದರು.
ಇರಕಲ್‌ಗಡಾ ವ್ಯಾಪ್ತಿಯ ಗ್ರಾಮಗಳ ಶುದ್ಧ ಕುಡಿವ ನೀರಿನ ಯೋಜನೆಗೆ ಮಂಜೂರಾದ 110 ಕೋಟಿ ರೂ.ಗಳನ್ನು ಕಾಲಮಿತಿಯೊಳಗೆ ಬಳಸಿಕೊಳ್ಳುವಂತೆ ಪಿಆರ್‌ಡಿ ಇಂಜಿನಿಯರ್‌ಗಳಿಗೆ ಶಾಸಕ ಸೂಚಿಸಿದರು. ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಸಿಡಿಪಿಒ, ಆರೋಗ್ಯ, ಕೃಷಿ, ಅಲ್ಪಸಂಖ್ಯಾತ, ಪಿಆರ್‌ಡಿ ಸೇರಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದರು. ನಗರಸಭೆ ಅಧ್ಯಕ್ಷೆ ಹೀರಾಬಾಯಿ ಸಿಂಗ್, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ತಹಸೀಲ್ದಾರ್ ಯು.ನಾಗರಾಜ್, ತಾಪಂ ಇಒಗಳಾದ ರಾಮರೆಡ್ಡಿ ಪಾಟೀಲ್, ದುಂಡಪ್ಪ ಇತರರಿದ್ದರು.
ಕ್ಷೇತ್ರಕ್ಕೆ ಮಂಜೂರಾದ ಅಭಿವೃದ್ಧಿ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ವಿಳಂಬ ನೀತಿ ಅನುಸರಿಸಿದರೆ ಅಧಿಕಾರಿಗಳನ್ನೇ ಹೊಣೆಯನ್ನಾಗಿ ಮಾಡಲಾಗುವುದು. | ಗಾಲಿ ಜನಾರ್ದನರೆಡ್ಡಿ ಶಾಸಕ ಗಂಗಾವತಿ
ಸಭೆಯುದ್ದಕ್ಕೂ ಅಧಿಕಾರಿಗಳು ಕಾಲಹರಣದ ಉತ್ತರ ನೀಡಿದ್ದು, ಯಾವುದೂ ಸಮರ್ಪಕವಾಗಿರದ ಕಾರಣ ನೀರಸವಾಗಿತ್ತು. ಪ್ರಗತಿಪರಿಶೀಲನೆ ಬದಲು ಬಹುತೇಕ ಅಧಿಕಾರಿಗಳು ಅನುದಾನ ಕೊಡಿಸಿ, ಕಾಮಗಾರಿ ಮಂಜೂರು ಮಾಡಿಸಿ ಎಂದು ಕೇಳಿದ್ದೇ ಹೆಚ್ಚು. ಸರ್ಕಾರಿ ಜಾಗ ಒತ್ತುವರಿ, ಜೆಜೆಎಂ ಯೋಜನೆ ಗುತ್ತಿಗೆದಾರರ ವಿರುದ್ಧ ಕ್ರಮ ಮತ್ತು ಅನೈತಿಕ ಚಟುವಟಿಕೆ ನಿಯಂತ್ರಣದ ಬಗ್ಗೆ ಪ್ರತಿಸಭೆಯಲ್ಲೂ ಶಾಸಕ ಕಿಡಿಕಾರಿದರೂ ಅಧಿಕಾರಿಗಳಂತೂ ಬದಲಾಗಿಲ್ಲ, ಕ್ರಮಕೈಗೊಂಡ ಯಾವುದೇ ದಾಖಲೆಗಳಿಲ್ಲ.ಇಲಾಖೆ ಅಧಿಕಾರಿಗಳ ಸಿದ್ಧಪಡಿಸಿದ ಪ್ರಗತಿಯನ್ನು ಶಾಸಕ ಗಂಟೆಗಟ್ಟಲೇ ಕೇಳಿದರು.
ಸಭೆಯಲ್ಲಿ ರೆಡ್ಡಿ ಆಪ್ತರು ಪಾಲ್ಗೊಂಡಿದ್ದರಲ್ಲದೆ, ಚರ್ಚೆಯಲ್ಲೂ ಭಾಗಿಯಾದರು. ಆಪ್ತರಾದ ಯಮನೂರಚೌಡ್ಕಿ ಅರ್ಧ ಸಭೆ ನಿಭಾಯಿಸಿದರೆ, ಇನ್ನೊಬ್ಬ ಆಪ್ತ ಎಂ.ಅಲಿಖಾನ್ ಮೌನವಾಗಿ ಅಧಿಕಾರಿಗಳ ಮೇಲೆ ಪ್ರಭಾವ ಬೀರುವ ಯತ್ನ ಮಾಡಿದರು. ಕಾಮಗಾರಿ ವಿಳಂಬ, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಯೋಜನೆ ಬದಲಾವಣೆ ಬಗ್ಗೆ ಆಪ್ತರು ಚರ್ಚಿಸಿ, ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದರು.