ಗಂಗಾವತಿ : ಸಮಾಜ ಪರಿವರ್ತನೆಗೆ ಪೂರಕವಾದ 12ನೇ ಶತಮಾನದ ವಚನಗಳು ಸರ್ವಕಾಲಕ್ಕೂ ಮಾನ್ಯತೆ ಪಡೆದಿವೆ ಎಂದು ರಾಜವಂಶಸ್ಥೆ ಲಲಿತಾರಾಣಿರಾಯಲು ಹೇಳಿದರು.
ನಗರದ ದೈವಜ್ಞ ಸಭಾಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ತಾಲೂಕು ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ತಾಲೂಕು ಕದಳಿ ಮಹಿಳಾ ಸಮಾವೇಶ ಮತ್ತು ರಾಜ್ಯ ಮಟ್ಟದ ಆಧುನಿಕ ಮಹಿಳಾ ವಚನೋತ್ಸವ ಉದ್ಘಾಟಿಸಿ ಮಾತನಾಡಿದರು.
ಉತ್ತಮ ಬದುಕು ಮತ್ತು ಸಮಾಜ ನಿರ್ಮಾಣಕ್ಕೆ ಶರಣರ ವಚನಗಳು ದಾರಿದೀಪವಾಗಿದ್ದು, ಸಾಮಾನ್ಯ ಜನರಿಗೆ ತಿಳಿಯುವ ವಚನ ಸಾಹಿತ್ಯವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕೊಪ್ಪಳ ತಾಲೂಕಾಧ್ಯಕ್ಷೆ ಸಾವಿತ್ರಿ ಮುಜುಂದಾರ್ ಮಾತನಾಡಿ, 12ನೇ ಶತಮಾನಕ್ಕಿಂತ ಪೂರ್ವದಲ್ಲಿ ಸಂಸ್ಕೃತ ಭಾಷೆಗೆ ಮಹತ್ವವಿದ್ದು, ಕೆಲವರಿಗೆ ಮಾತ್ರ ಗೊತ್ತಾಗುತ್ತಿತ್ತು. ಪ್ರತಿಯೊಬ್ಬರಿಗೂ ಅರ್ಥವಾಗುವ ಸರಳ ಭಾಷೆಯ ವಚನ ಸಾಹಿತ್ಯ ಎಲ್ಲ ಕಾಲಕ್ಕೂ ಅನ್ವಯವಾಗಲಿವೆ ಎಂದು ಹೇಳಿದರು.
ಕಾರ್ಯಕ್ರಮದ ಕುರಿತು ವೇದಿಕೆ ತಾಲೂಕಾಧ್ಯಕ್ಷೆ ಸಿ.ಮಹಾಲಕ್ಷ್ಮೀ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಬ್ದಕ್ಕೆ ನಾಚಿದೊಡಂತಯ್ಯ ಆಧುನಿಕ ವಚನಗಳ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು.
ಅಧುನಿಕ ವಚನೋತ್ಸವದ ವಚನ ಸ್ಪರ್ಧೆಯಲ್ಲಿ ವಿಜೇತರಾದ ಡಾ.ಪ್ರಿಯಾ ಮೇಧಾ (ಪ್ರಥಮ), ಸೌಮ್ಯಾ ಮಾಟೂರು (ದ್ವೀತಿಯಾ) ಮತ್ತು ವಿಜಯಲಕ್ಷ್ಮೀಗೆ (ತೃತೀಯ) ನಗದು ಬಹುಮಾನ ನೀಡಿ ಗೌರವಿಸಲಾಯಿತು.
ನಿವೃತ್ತ ಉಪನ್ಯಾಸಕಿ ಗಂಗಮ್ಮಸತ್ಯಂಪೇಟೆ, ಹಿರಿಯ ವೈದ್ಯೆ ಸುಲೋಚನಾ ಚಿನಿವಾಲರ್, ಕದಳಿ ಮಹಿಳಾ ವೇದಿಕೆ ಪದಾಧಿಕಾರಿಗಳಾದ ಪ್ರೊ.ಜಗದೇವಿ ಕಲಶೆಟ್ಟಿ, ಶ್ರೀದೇವಿ ಕೃಷ್ಣಪ್ಪ, ವಿಜಯಲಕ್ಷ್ಮೀ ಸೂಗೂರು, ಕವಿತಾ ಗುರುಮೂರ್ತಿ, ಸರೋಜಾ ಮಲ್ಲಿಕಾರ್ಜುನ ನಾಗಪ್ಪ, ಮಂಜರಿ ಸಾಗರ ಮುನವಳ್ಳಿ, ಮಂಗಳಾ ನೂಲ್ವಿ, ಡಾ.ಅಕ್ಷತಾ ಪಟ್ಟಣಶೆಟ್ಟಿ, ಎಚ್.ನಾಗರತ್ನಾ, ಕೆ.ಉಮಾ, ಜಯಶ್ರೀ ಹಕ್ಕಂಡಿ ಇತರರಿದ್ದರು.