ಜಿಲ್ಲೆ

ಕನ್ನಡ ಬೆಳವಣಿಗೆಗೆ ಭಾಷಾ ಪ್ರಯೋಗಾಲಯ ಅಗತ್ಯ; ಸಮ್ಮೇಳನಾಧ್ಯಕ್ಷೆ ಮುಮ್ತಾಜ್ ಬೇಗಂ ಪ್ರತಿಪಾದನೆ

ಗಂಗಾವತಿ ತಾಲೂಕು 7ನೇ ಸಾಹಿತ್ಯ ಸಮ್ಮೇಳನ

ಹೇರೂರು ವಿರುಪನಗೌಡ ತಾತಾನವರ ವೇದಿಕೆ, ಗಂಗಾವತಿ : ಜಾಗತೀಕರಣದಿಂದಾಗಿ ತಂತ್ರಜ್ಞಾನ ಬಳಕೆಗೆ ಆದ್ಯತೆ ನೀಡಬೇಕಿದೆ. ಜಿಲ್ಲೆಯಲ್ಲಿ ಕನ್ನಡ ಬೆಳವಣಿಗೆಗೆ ಭಾಷಾ ಪ್ರಯೋಗಾಲಯದ ಅಗತ್ಯವಿದೆ ಎಂದು ತಾಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಮುಮ್ತಾಜ್ ಬೇಗಂ ಹೇಳಿದರು.

ಸಮ್ಮೇಳನಾಧ್ಯಕ್ಷೆ ಮುಮ್ತಾಜ್ ಬೇಗಂ

ತಾಲೂಕಿನ ಜಂಗಮರ ಕಲ್ಗುಡಿಯಲ್ಲಿ ಭಾನುವಾರ ಕಸಾಪ ತಾಲೂಕು ಘಟಕದಿಂದ ಆಯೋಜಿಸಿದ್ದ 7ನೇ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು. ಕನ್ನಡಕ್ಕೆ ಶಾಸೀಯ ಸ್ಥಾನಮಾನ ಸಿಕ್ಕರೂ ಇದುವರೆಗೆ ಅಧ್ಯಯನ ಕೇಂದ್ರ ಆರಂಭವಾಗಿಲ್ಲ. ಕಲ್ಯಾಣ ಕರ್ನಾಟಕ ಪ್ರದೇಶದ ಗಡಿಯಲ್ಲಿರುವ 13 ಗ್ರಾಮಗಳ ಕನ್ನಡ ಭಾಷಿಕ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಅಗತ್ಯ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.

ಕಲಂ 371 ಜೆ ವಿಧೇಯಕ ಅನುಷ್ಠಾನ ವಿಳಂಬದಿಂದ ಕಲ್ಯಾಣ ಕರ್ನಾಟಕದ ಭಾಗದಲ್ಲಿ ನಿರೀಕ್ಷಿತ ಅಭಿವೃದ್ಧಿಯಾಗುತ್ತಿಲ್ಲ. ಮಹಿಳಾ ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರಗಳ ಅಸ್ತಿತ್ವಕ್ಕೆ ಹೋರಾಟದ ಅಗತ್ಯವಿದೆ. ಪ್ರಾದೇಶಿಕ ಅಸಮಾನತೆ ತೊಲಗಿಸುವುದಕ್ಕಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನ ಬಳಕೆಯಾಗಬೇಕು.

ಕೃಷಿ ಚಟುವಟಿಕೆ ವಿಸ್ತರಣೆ ಜತೆಗೆ ನೀರಾವರಿ ಸಮಸ್ಯೆಗಳ ಪರಿಹಾರಕ್ಕೆ ಸಾಂಕ ಯತ್ನ ಬೇಕು. ರೈತರ ಆದಾಯ ದ್ವಿಗುಣಗೊಳಿಸುವ ಯೋಜನೆ ಜಾರಿಗೊಳಿಸಬೇಕು. ಅಪೌಷ್ಟಿಕತೆ ಮತ್ತು ಶಿಶುಮರಣ ನಿಯಂತ್ರಣಕ್ಕೆ ಪರಿಣಾಮಕಾರಿ ಯೋಜನೆಗಳನ್ನು ಅನುಷ್ಟಾನಗೊಳಿಸಬೇಕು. ಸಣ್ಣಾಟ, ದೊಡ್ಡಾಟ ಮತ್ತು ಬಯಲಾಟದ ಮೂಲಕ ಜಾನಪದ ಸಂಸ್ಕೃತಿ ಉಳಿಸುವ ಕೆಲಸವಾಗಬೇಕಿದೆ. ತಾಲೂಕಿನ ಇತಿಹಾಸದ ತೊಟ್ಟಿಲುಗಳನ್ನು ಪ್ರವಾಸಿ ತಾಣವಾಗಿ ಪರಿವರ್ತಿಸಬೇಕೆಂದು ಸಮ್ಮೇಳನಾಧ್ಯಕ್ಷೆ ಮುಮ್ತಾಜ್ ಬೇಗಂ ಅಭಿಪ್ರಾಯಪಟ್ಟರು.