ಗಂಗಾವತಿ: ನಗರದ ಪ್ರಮುಖ ರಸ್ತೆಗಳಲ್ಲಿ ಆಶ್ರಯ ಪಡೆದ ಬಿಡಾಡಿ ದನಗಳನ್ನು ವಾರಸುದಾರರು ಸುಪರ್ದಿಗೆ ಪಡೆಯದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಹೇಳಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ್ದು, ನಗರದ ಸಿಬಿಎಸ್, ಮಹಾವೀರ, ಗಾಂಧಿ, ಗಣೇಶ, ನೀಲಕಂಠೇಶ್ವರ, ಬಸ್ ನಿಲ್ದಾಣ ಸರ್ಕಲ್, ಬಂಬೂಬಜಾರ್ ಕ್ರಾಸ್ ಬಳಿ ಮುಖ್ಯರಸ್ತೆ ಸೇರಿ ಪ್ರಮುಖ ವತ್ತಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ವತ್ತಗಳಲ್ಲಿ ಹಾಗೂ ಸಾರ್ವಜನಿಕರ ರಸ್ತೆಗಳಲ್ಲಿ ತಿರುಗಾಡುವುದು, ಆಶ್ರಯ ಪಡೆಯುತ್ತಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ಇದರಿಂದ ಅಪಘಾತ ಹೆಚ್ಚುತ್ತಿದ್ದು, ಬಿಡಾಡಿ ದನಗಳು ಜನರಿಗೆ ಇರಿಯುವುದು ಸೇರಿ ದಾಳಿ ನಡೆಸುತ್ತಿರುವ ಪ್ರಕರಣ ಕಂಡು ಬಂದಿದೆ. ದನಗಳ ಮಾಲೀಕರು ಜು.3ರೊಳಗೆ ದನಗಳನ್ನು ಸುಪರ್ದಿಗೆ ಪಡೆಯಬೇಕು. ದನಗಳಿಂದ ಅನಾಹುತ ಸಂಭವಿಸಿದರೆ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದ್ದು, ದನಗಳನ್ನು ಗೋಶಾಲೆಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.