ಗಂಗಾವತಿ: ಸೌಹಾರ್ದ ಸಹಕಾರಿಗಳ ಆಡಳಿತಾತ್ಮಕ ವಿಚಾರದಲ್ಲಿ ಲೆಕ್ಕಪರಿಶೋಧನೆ ಇಲಾಖೆಯಿಂದ ಕಿರುಕುಳವಾದರೆ ಒಕ್ಕೂಟದ ಗಮನಕ್ಕೆ ತರುವಂತೆ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಅಧ್ಯಕ್ಷ ಬಿ.ನಾಗಲಿಂಗಪ್ಪ ಪತ್ತಾರ ಹೇಳಿದರು.
ನಗರದ ಲಲಿತ ಮಹಲ್ ಸಭಾಂಗಣದಲ್ಲಿ ರಾಜ್ಯ ಸೌಹಾರ್ದ ಸಂಯುಕ್ತ ನಿಯಮಿತದ ಕಲಬುರಗಿ ಪ್ರಾಂತೀಯ ಕಚೇರಿ ಬುಧವಾರ ಆಯೋಜಿಸಿದ್ದ ತ್ರಿವಳಿ ತಾಲೂಕಿನ ಸೌಹಾರ್ದ ಸಹಕಾರಿಗಳ ಸಿಇಒಗಳ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದರು. ಒಕ್ಕೂಟದ ಹೋರಾಟದ ಲದಿಂದ ಆದಾಯ ತೆರಿಗೆ ಸಮಸ್ಯೆ ಇತ್ಯರ್ಥಕ್ಕೆ ಬಂದಿದ್ದು, ಕೆಲ ನಿಯಮಾವಳಿಗಳ ತಿದ್ದುಪಡಿಗೆ ಹೋರಾಟ ನಿರಂತರವಾಗಿದೆ. ಲೆಕ್ಕಪರಿಶೋಧನೆ ಇಲಾಖೆಯಿಂದ ಹಣದ ಬೇಡಿಕೆಗಳ ಬಗ್ಗೆ ಹಲವು ದೂರುಗಳು ಬಂದಿದ್ದು, ಸರ್ಕಾರದ ಗಮನಕ್ಕೂ ತರಲಾಗಿದೆ ಎಂದರು.
ಸಿಬಿಎಸ್ ಬ್ಯಾಂಕ್ ಸಿಇಒ ಸಿ.ಜಿ.ಜವಳಿ ಮಾತನಾಡಿ, ಆಡಳಿತ ಮಂಡಳಿ ವಿಶ್ವಾಸರ್ಹತೆ ಜತೆಗೆ ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕಿದೆ. ಸೇವೆ ಗುರಿಯನ್ನಾಗಿಟ್ಟುಕೊಂಡು ಸಂಸ್ಥೆಗಳನ್ನು ಅಭಿವೃದ್ಧಿ ಪಡಿಸುವಂತೆ ಸಲಹೆ ನೀಡಿದರು.
ಸಭೆಯಲ್ಲಿ ಸೌಹಾರ್ದಗಳಲ್ಲಿ ವ್ಯವಹಾರ ಅಭಿವೃದ್ಧಿ ಹಾಗೂ ಮುಖ್ಯ ಕಾರ್ಯನಿರ್ವಾಹಕರ ಕರ್ತವ್ಯಗಳು, ಜವಾಬ್ದಾರಿಗಳು ಕುರಿತು ವಿಕಾಸ ಬ್ಯಾಂಕ್ ಬಳ್ಳಾರಿ ಶಾಖೆ ಸಿಇಒ ಮಹೇಶಕುಮಾರ ಉಪನ್ಯಾಸ ನೀಡಿದರು. ಕನಕಗಿರಿ, ಕಾರಟಗಿ ಮತ್ತು ಗಂಗಾವತಿ ತಾಲೂಕಿನ ಸಿಇಒಗಳು ಭಾಗವಹಿಸಿದ್ದರು.