ಗಂಗಾವತಿ ತಾಪಂ ಮಂಥನ ಸಭಾಂಗಣದಲ್ಲಿ ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಪಿಡಿಒ, ವಿಎ ಮತ್ತು ಮುಖ್ಯಶಿಕ್ಷಕರ ಪಾತ್ರ ಮತ್ತು ಜವಾಬ್ದಾರಿ ಕುರಿತು ಬಳ್ಳಾರಿಯ ರೀಡ್ಸ್ ಸಂಸ್ಥೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಭಿತ್ತಿ ಪತ್ರಗಳನ್ನು ಗುರುವಾರ ಬಿಡುಗಡೆಗೊಳಿಸಲಾಯಿತು. ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸಂಪನ್ಮೂಲ ವ್ಯಕ್ತಿ ಎಚ್.ಎಲ್.ರಾಘವೇಂದ್ರ, ರೀಡ್ಸ್ ಸಂಸ್ಥೆ ಸಿಇಒ ತಿಪ್ಪೇಶಪ್ಪ, ಗ್ರಾಪಂ ಅಧ್ಯಕ್ಷರಾದ ಹುಲಿಗೆಮ್ಮ ಹೊನ್ನಪ್ಪ ನಾಯಕ, ಆಂಜನೇಯ, ಪಿಡಿಒ ನಾಗೇಶ ಕುರ್ಡಿ, ಡಿಸಿಪಿಒ ಯಮನಮ್ಮ ಇತರರಿದ್ದರು.  
ಜಿಲ್ಲೆ

ಬಾಲ್ಯ ವಿವಾಹ ತಡೆಯದಿದ್ದರೆ ಕಾನೂನು ಕ್ರಮ, ಸಂಪನ್ಮೂಲ ವ್ಯಕ್ತಿ ಎಚ್.ಎಲ್.ರಾಘವೇಂದ್ರ ಹೇಳಿಕೆ

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ಬಾಲ್ಯ ವಿವಾಹ ಪ್ರಕರಣ ನಿಯಂತ್ರಿಸದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕಾಗಿ ಕಾನೂನು ರೂಪಿಸಲಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸಂಪನ್ಮೂಲ ವ್ಯಕ್ತಿ ಎಚ್.ಎಲ್.ರಾಘವೇಂದ್ರ ಹೇಳಿದರು.

ನಗರದ ತಾಪಂ ಮಂಥನ ಸಭಾಂಗಣದಲ್ಲಿ ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಪಿಡಿಒ, ವಿಎ ಮತ್ತು ಮುಖ್ಯಶಿಕ್ಷಕರ ಪಾತ್ರ ಮತ್ತು ಜವಾಬ್ದಾರಿ ಕುರಿತು ಬಳ್ಳಾರಿಯ ರೀಡ್ಸ್ ಸಂಸ್ಥೆಯಿಂದ ಗುರುವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು, ಗ್ರಾಮೀಣ ಭಾಗದಲ್ಲಿರುವ ಕಾವಲು ಸಮಿತಿ ಸದಸ್ಯರು ಗಂಭೀರವಾಗಿ ಪರಿಗಣಿಸಬೇಕು. ಇಂತಹ ಪ್ರಕರಣ ಮರುಕಳಿಸದಂತೆ ಎಚ್ಚರಿಕೆವಹಿಸಬೇಕಿದ್ದು, ನಿರ್ಲಕ್ಷಿಸುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಇತ್ತೀಚಿಗೆ ಇಂತಹ ಪ್ರಕರಣ ಹೆಚ್ಚುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ರೀಡ್ಸ್ ಸಂಸ್ಥೆ ಸಿಇಒ ತಿಪ್ಪೇಶಪ್ಪ ಮಾತನಾಡಿ, ಬಾಲ್ಯ ವಿವಾಹ ನಿಯಂತ್ರಣಕ್ಕೆ ಕಾವಲು ಸಮಿತಿ ಸದಸ್ಯರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಿದ್ದು, ವಿವಾಹಕ್ಕೆ ಸಿದ್ಧತೆ ಮಾಡಿಕೊಳ್ಳುವ ಮುನ್ನವೇ ಸಮಿತಿ ಸದಸ್ಯರು ಜಾಗೃರಾಗಬೇಕು. ಪ್ರೇರಿಪಿಸುವವರ ವಿರುದ್ಧ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಕರಣ ದಾಖಲಿಸಬೇಕಿದ್ದು, ಗ್ರಾಮಮಟ್ಟದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿಯಂತ್ರಣಕ್ಕೆ ಮೇಲುಸ್ತುವಾರಿವಹಿಸಬೇಕಿದೆ ಎಂದರು.

ಬಾಲ್ಯ ವಿವಾಹ ನಿಯಂತ್ರಣಕ್ಕೆ ಪೂರಕವಾದ ಕಾಯ್ದೆ, ಉಸ್ತುವಾರಿ ಸಮಿತಿಯ ಜವಾಬ್ದಾರಿ ಮತ್ತು ಜಾಗೃತಿ ಅಭಿಯಾನದ ಬಗ್ಗೆ ಮಾಹಿತಿ ನೀಡಲಾಯಿತು. ಇದೇ ಸಂದರ್ಭದಲ್ಲಿ ಬಾಲ್ಯ ವಿವಾಹ ನಿಷೇಧ ಕುರಿತ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.

ಗ್ರಾಪಂ ಅಧ್ಯಕ್ಷರಾದ ಹುಲಿಗೆಮ್ಮ ಹೊನ್ನಪ್ಪ ನಾಯಕ, ಆಂಜನೇಯ, ಪಿಡಿಒಗಳಾದ ನಾಗೇಶ ಕುರ್ಡಿ, ಮಂಗಳಪ್ಪ ನಾಯ್ಕ, ಡಿಸಿಪಿಒ ಯಮನಮ್ಮ, ವಿವಿಧ ಗ್ರಾಪಂ ಪಿಡಿಒ ಮತ್ತು ಗ್ರಾಮಾಡಳಿತಾಧಿಕಾರಿಗಳಿದ್ದರು.