ಗಂಗಾವತಿ: ಕೃಷಿ ಕೂಲಿಕಾರರ ಕೊರತೆ ನೀಗಿಸಲು ಯಂತ್ರೋಪಕರಣಗಳ ಬಳಕೆಗೆ ಸರ್ಕಾರ ಆದ್ಯತೆ ನೀಡುತ್ತಿದ್ದು, ಕೃಷಿ ಚಟುವಟಿಕೆ ಪೂರಕ ಸಲಕರಣೆಗಳನ್ನು ಸಣ್ಣ, ಅತಿ ಸಣ್ಣ ರೈತರಿಗೆ ಒದಗಿಸಲಾಗುವುದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ತಾಲೂಕಿನ ಕೋಟಯ್ಯಕ್ಯಾಂಪ್ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಕೃಷಿ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಹೈಟೆಕ್ ಹಾರ್ವೆಸ್ಟ್ ಹಬ್ ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಗಂಗಾವತಿ, ಕಾರಟಗಿ ಭಾಗ ಸಂಪೂರ್ಣ ನೀರಾವರಿ ಪ್ರದೇಶವಾಗಿದ್ದು ಅತಿ ಹೆಚ್ಚು ಭತ್ತ ಬೆಳೆಯಲಾಗುತ್ತಿದೆ. ಕಟಾವು ಮಾಡಲು ಕೂಲಿ ಕಾರ್ಮಿಕರ ಕೊರತೆ ನೀಗಿಸಲು ಯಂತ್ರೋಪಕರಣಗಳನ್ನೊಳಗೊಂಡ ಹಬ್ ಆರಂಭಿಸಲಾಗಿದೆ. ಭತ್ತ ನಾಟಿ ಯಂತ್ರಗಳಿಗೂ ಹೆಚ್ಚಿನ ಸಹಾಯಧನ ನೀಡಲು ಸರ್ಕಾರದ ಗಮನಕ್ಕೆ ತರುತ್ತೇನೆ. ರಾಜ್ಯ ಸರ್ಕಾರ ರೈತಪರವಾಗಿದ್ದು, ಕೃಷಿ ಇಲಾಖೆ ಕಾರ್ಯಕ್ರಮಗಳನ್ನು ಸಮರ್ಪಕ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಜಂಟಿ ಕಷಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಮಾತನಾಡಿ, ಹಾರ್ವೆಸ್ಟ್ ಹಬ್ ಯೋಜನೆಗೆ ಜಿಪಂ ಸಿಇಒ ಅಧ್ಯಕ್ಷತೆಯಲ್ಲಿ ಲಾನುಭವಿಗಳನ್ನು ಆಯ್ಕೆ ಮಾಡಿದ್ದು, ಲಾಟರಿ ಮೂಲಕ ಯೋಜನೆ ಲಾನುಭವಿಗಳನ್ನು ಗುರುತಿಸಲಾಗಿದೆ. ಎಸ್‌ಬಿಐ ಆರ್ಥಿಕ ನೆರವಿನೊಂದಿಗೆ ಆರಂಭಗೊಂಡಿದ್ದು, ಕೃಷಿ ಇಲಾಖೆ ನಿರ್ವಹಿಸಲಿದೆ ಎಂದರು.
ಸಂಘದ ಅಧ್ಯಕ್ಷ ಎನ್.ಸತ್ಯನಾರಾಯಣ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ, ಕೃಷಿ ಸಹಾಯಕ ನಿರ್ದೇಶಕ ಸಂತೋಷ ಪಟ್ಟದಕಲ್, ಮುಖಂಡರಾದ ಜೆ.ಸೂರ್ಯಕುಮಾರ, ಎಂ.ಶ್ರೀನಿವಾಸ, ಎನ್.ಸತ್ಯನಾರಾಯಣ, ಟಿ.ಶ್ರೀನಿವಾಸ, ಎನ್.ನರಸಿಂಹಮೂರ್ತಿ ಇತರರಿದ್ದರು.