ಗಂಗಾವತಿ: ಅತಿಯಾದ ತಾಂತ್ರಿಕತೆ ಬಳಕೆಯಿಂದ ಸಂಬಂಧಗಳಿಗೆ ಧಕ್ಕೆಯುಂಟಾಗುತ್ತಿದ್ದು, ಧಾರ್ಮಿಕ ಮತ್ತು ಅಧ್ಯಾತ್ಮಕ್ಕೆ ಸಮಯ ಮೀಸಲಿಡುವಂತೆ ಅಂಕಲಗಿ-ಕುಂದರಗಿ ಅಡವಿ ಸಿದ್ದೇಶ್ವರ ಮಠದ ಅಮರಸಿದ್ದೇಶ್ವರ ಸ್ವಾಮೀಜಿ ಸಲಹೆ ನೀಡಿದರು.
ನಗರದ ಕಲ್ಮಠದ ಶ್ರೀ ಕೊಟ್ಟೂರೇಶ್ವರ ಪುರಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಿವಯೋಗಿವರೇಣ್ಯ ಲಿಂ.ಶ್ರೀ ಕೊಟ್ಟೂರೇಶ್ವರ ಮಹಾಶಿವಯೋಗಿಗಳವರ 104ನೇ ವರ್ಷದ ಸ್ಮರಣೋತ್ಸವ, ಪುರಾಣ ಪ್ರವಚನ ಮತ್ತು ಶರಣ ಸಂಸ್ಕೃತಿ ಉತ್ಸವ ಸಮಾರೋಪದಲ್ಲಿ ಮಾತನಾಡಿದರು.
ಮೊಬೈಲ್, ಟಿವಿ ಹಾವಳಿಯಿಂದ ಯುವ ಸಮುದಾಯ ಸಂಬಂಧಗಳನ್ನು ಕಳೆದುಕೊಳ್ಳುತ್ತಿದ್ದು, ಖಿನ್ನತೆಗೊಳಗಾಗುತ್ತಿದ್ದಾರೆ. ಮೊಬೈಲ್‌ಗೆ ನೀಡುವ ಸಮಯವನ್ನು ಧಾರ್ಮಿಕ ಮತ್ತು ವೈಚಾರಿಕ ಪುಸ್ತಕಗಳನ್ನು ಓದುವುದರತ್ತ ನೀಡಿ. ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಿರಿ. ಸಂಬಂಧಗಳನ್ನು ಗಟ್ಟಿಗೊಳಿಸುವ ಚಟುವಟಿಕೆಗಳತ್ತ ಗಮನಹರಿಸಿ ಎಂದು ಸಲಹೆ ನೀಡಿದರು.
ಕಲ್ಮಠದ ಡಾ.ಕೊಟ್ಟೂರು ಸ್ವಾಮೀಜಿ ಮಾತನಾಡಿ, ಭಕ್ತರ ಸಹಕಾರದೊಂದಿಗೆ ಅಧ್ಯಾತ್ಮ ಮತ್ತು ಧಾರ್ಮಿಕ ಚಟುವಟಿಕೆಗಳು ಹೆಚ್ಚುತ್ತಿವೆ. ಶಿಕ್ಷಣ ಕ್ಷೇತ್ರ ಬಲಪಡಿಸಲು ನರ್ಸರಿಯಿಂದ ಸ್ನಾತಕೋತ್ತವರೆಗೆ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪುರಾಣ ಪ್ರವಚನಕಾರ ಶಿವರಾಜ ಶಾಸಿ ರಚಿಸಿರುವ ನಾಮವಳಿ ಕಿರುಹೊತ್ತಿಗೆ ಬಿಡುಗಡೆಗೊಳಿಸಲಾಯಿತು. ಇದಕ್ಕೂ ಮುನ್ನ ಶ್ರೀ ಕೊಟ್ಟೂರೇಶ್ವರ ಮಹಾಶಿವಯೋಗಿಗಳ ಭಾವಚಿತ್ರ ಮೆರಣಿವಣಿಗೆ ಹಮ್ಮಿಕೊಳ್ಳಲಾಗಿತ್ತು. ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಪುರಾಣ ಮಹಾಮಂಗಲ, ಭಜನೆ ಮತ್ತು ಪ್ರಸಾದ ವಿತರಣೆ ಜರುಗಿತು.
ಮೂರುಸಾವಿರ ವಿರಕ್ತ ಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ, ಕಮತಗಿ ಸಂಸ್ಥಾನ ಮಠದ ಹುಚ್ಚೇಶ್ವರಸ್ವಾಮೀಜಿ, ಅಮೀನಗಡಾ ಗಚ್ಚಿನಮಠದ ಶಂಕರ ರಾಜೇಂದ್ರ ಸ್ವಾಮೀಜಿ, ಗುಳೇದಗುಡ್ಡದ ನಾಗಭೂಷಣ ಸ್ವಾಮೀಜಿ, ಗಡ್ಡಿಯ ಸಂಗಮೇಶ್ವರ ಸ್ವಾಮೀಜಿ, ಬೆಟ್ಟದೂರು ಹಿರೇಮಠದ ಮಹಾದೇವ ದೇವರು, ಅಕ್ಕಲಕೋಟೆಯ ಬಸವಲಿಂಗ ಸ್ವಾಮೀಜಿ, ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ ಇತರರಿದ್ದರು.