ಗಂಗಾವತಿ: ಇಲ್ಲಿನ ಶಾರದಾ ನಗರದ ಶ್ರೀ ಶಂಕರ ಮಠದ ಶಾರದಾಂಬೆ ದೇವಾಲಯದಲ್ಲಿ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿಗಳ ವರ್ಧಂತ್ಯುತ್ಸವ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ದೇವಾಲಯದಲ್ಲಿ ಮೂರ್ತಿಗೆ ವಿಶೇಷ ಪೂಜೆ, ವಿವಿಧ ಭಜನಾ ಮಂಡಳಿಗಳಿಂದ ಶ್ರೀರಾಮದೇವರ ತಾರಕ ಮಂತ್ರ, ಶಂಕರಾಚಾರ್ಯ ವಿರಚಿತ ಕಲ್ಯಾಣ ವೃಷ್ಟಿ ಭವ ಸೇರಿ ಇತರ ಶ್ಲೋಕಗಳ ಪಾರಾಯಣ ಮತ್ತು ಧಾರ್ಮಿಕ ಸಭೆ ನೆರವೇರಿಸಲಾಯಿತು.
ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಮಾತನಾಡಿ, ಸನಾತನ ಸಂಸ್ಕೃತಿಯನ್ನು ವಿಶ್ವಕ್ಕೆ ಪಸರಿಸಿದ ಕೀರ್ತಿ ಜಗದ್ಗುರು ಶ್ರೀಭಾರತೀ ತೀರ್ಥರಿಗೆ ಸಲ್ಲುತ್ತಿದ್ದು, ಧಾರ್ಮಿಕ ಸೇವೆಗಳ ಜತೆಗೆ ಸಮಾಜಮುಖಿ ಚಟುವಟಿಕೆಗಳಿಗೂ ಆದ್ಯತೆ ನೀಡಿದ್ದಾರೆ. ಶಂಗೇರಿ ಶಾರದಾ ಪೀಠವು ಧಾರ್ಮಿಕ ಜಾಗತಿ ಜತೆಗೆ ದೇಶದ ರಕ್ಷಣಾ ವ್ಯವಸ್ಥೆ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳಿಗೆ ತನ್ನದೇ ಆದ ಕೊಡುಗೆ ನೀಡಿದೆ ಎಂದರು.
ಶ್ರೀಮಠದ ಉಭಯ ಶ್ರೀಗಳ ವಿಜಯಯಾತ್ರೆ ಕುರಿತು ಭಜನಾ ಮಂಡಳಿ ಸದಸ್ಯೆ ಅನಿತಾ ಅಳವಂಡಿಕರ್ ಮಾತನಾಡಿದರು. ದೇವಾಲಯದ ಅರ್ಚಕ ಕುಮಾರ ಭಟ್‌ರಿಂದ ದೇವಾಲಯದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಮುಖಂಡರಾದ ರಾಘವೇಂದ್ರ ಅಳವಂಡಿಕರ್, ದತ್ತಾತ್ರೇಯ ಹೊಸಳ್ಳಿ, ಬಾಲಕಷ್ಣ ದೇಸಾಯಿ, ಗಾಯತ್ರಿ ಅಳವಂಡಿಕರ್, ಶ್ರೀನಿವಾಸ್ ಕರಮುಡಿ, ವೇಣು, ಶೇಷಗಿರಿ ಗಡಾದ್, ಶಂಕರ ಹೊಸಳ್ಳಿ, ಸುದರ್ಶನ ವೈದ್ಯ ಇತರರಿದ್ದರು.