ಗಂಗಾವತಿ: ಹೈದರಾಬಾದ್‌ನ ಕೇಂದ್ರೀಯ ವಿವಿ ವ್ಯಾಪ್ತಿಯಲ್ಲಿನ ಭೂ ಕಬಳಿಕೆ ಪ್ರಕರಣ ಖಂಡಿಸಿ ಎಸ್‌ಎಫ್‌ಐ ತಾಲೂಕು ಸಮಿತಿ ಸದಸ್ಯರು ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಸಂಕಲ್ಪ ಪಿಯು ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಮಿತಿ ಸದಸ್ಯರು ಬೇಡಿಕೆ ಮನವಿಯನ್ನು ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ ಗೌಡರ್‌ಗೆ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಗ್ಯಾನೇಶ ಕಡಗದ್ ಮಾತನಾಡಿ, 400 ಎಕರೆ ಭೂಭಾಗ ಕಬಳಿಸಲು ಅಲ್ಲಿನ ಸರ್ಕಾರ ಹುನ್ನಾರ ನಡೆಸಿದೆ. ಮೊದಲ ಹಂತವಾಗಿ ಹಲವು ವರ್ಷಗಳ ಮರಗಳನ್ನು ಕಡಿಯುತ್ತಿದೆ. ಪಕ್ಷಿ ಸಂಕುಲಗಳ ತಾಣ ನಾಶವಾಗುತ್ತಿದೆ. ಶಿಕ್ಷಣ ಸಂಸ್ಥೆಯ ಯಾವುದೇ ಭೂಮಿ ಪರಭಾರೆ ಮಾಡದಂತೆ ನ್ಯಾಯಾಲಯದ ಆದೇಶವಿದ್ದರೂ ಅಲ್ಲಿನ ಸರ್ಕಾರ ಗಮನಿಸುತ್ತಿಲ್ಲ. ಐಟಿ ಪಾರ್ಕ್ ನೆಪದಲ್ಲಿ ಭೂಕಬಳಿಕೆಗೆ ಮುಂದಾಗಿದ್ದು ಸರಿಯಲ್ಲ. ಉದ್ದೇಶಿತ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ನೀಡಲು ಕಾಂಗ್ರೆಸ್ ಸರ್ಕಾರ ಸಂಚು ನಡೆಸಿದೆ ಎಂದರು.
ಜಿಲ್ಲಾ ಕಾರ್ಯದರ್ಶಿ ಶಿವಕುಮಾರ, ತಾಲೂಕಾಧ್ಯಕ್ಷ ಯು.ನಾಗರಾಜ್, ಪದಾಧಿಕಾರಿಗಳಾದ ಬಾಲಾಜಿ ಚಳ್ಳಾರಿ, ರಮೇಶ, ಮಾರುತಿ, ಶರಣಬಸವ, ಮಲ್ಲೇಶ, ಮಹೇಶ, ಅನಿತಾ, ಅಂಕಿತಾ, ವಿಜಯಲಕ್ಷ್ಮೀ, ಅಶ್ವಿನಿ ಇತರರಿದ್ದರು.