ಗಂಗಾವತಿ: ರಾಜ್ಯ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಶ್ರಮಿಸಲಾಗುತ್ತಿದ್ದು, ಮನೆಮನೆಗೆ ತೆರಳಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಯೋಜನೆ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಡಾ.ಕೆ.ವೆಂಕಟೇಶಬಾಬು ಹೇಳಿದರು.
ರಾಜ್ಯ ಸರ್ಕಾರದ ಅನ್ನ ಸುವಿಧಾ ಯೋಜನೆಯಡಿ ನಗರದ ಹಿರೇಜಂತಕಲ್‌ನಲ್ಲಿ ಸಮಿತಿ ಸದಸ್ಯರು ಗುರುವಾರ ಹಮ್ಮಿಕೊಂಡಿದ್ದ ಮನೆಮನೆಗೆ ಪಡಿತರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಸಿವು ಮುಕ್ತ ಕರ್ನಾಟಕ ಮತ್ತು ಸಾಮಾಜಿಕ ಭದ್ರತೆ ಕಳಕಳಿಯೊಂದಿಗೆ ರಾಜ್ಯ ಸರ್ಕಾರ ಅನ್ನಸುವಿಧಾ ಯೋಜನೆ ಜಾರಿಗೊಳಿಸಿದೆ. ಪಡಿತರ ಪಡೆಯಲಾಗದ 80ವರ್ಷ ಮೇಲ್ಪಟ್ಟ ಅನ್ನಭಾಗ್ಯ ಯೋಜನೆ ಲಾನುಭವಿಗಳ ಮನೆಗೆ ತೆರಳಿ ಪಡಿತರ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಸಮಿತಿ ಸದಸ್ಯರು ತಾಲೂಕು ವ್ಯಾಪ್ತಿಯ ಲಾನುಭವಿಗಳ ಪಟ್ಟಿ ತಯಾರಿಸಿ, ಮನೆಗಳಿಗೆ ತೆರಳಿ ವಿತರಿಸುವ ಯೋಜನೆ ರೂಪಿಸಿದ್ದಾರೆ. ಯೋಜನೆ ಅನುಷ್ಠಾನಕ್ಕೆ ತಾಪಂ ಮತ್ತು ಕಂದಾಯ ಸಿಬ್ಬಂದಿ ನೆರವಾಗುತ್ತಿದ್ದಾರೆ ಎಂದರು.
ಸಮಿತಿ ಸದಸ್ಯ ಕಾರ್ಯದರ್ಶಿ ರಾಮರೆಡ್ಡಿ ಪಾಟೀಲ್, ಸದಸ್ಯರಾದ ಹಮೀದ್ ಮುಲ್ಲಾ, ದಾವಲ್, ಮಂಜುನಾಥ ಕಲಾಲ್, ಆಹಾರ ಶಿರಸ್ತೇದಾರ್ ವೈ.ಸುಹಾಸ್, ನಿರೀಕ್ಷರಾದ ನಾಗರತ್ನಮ್ಮ, ಶೇಖರಪ್ಪ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಹೊನ್ನೂರ್ ಇತರರಿದ್ದರು.