ಗಂಗಾವತಿ: ನನೆಗುದಿಗೆ ಬಿದ್ದಿರುವ ನಗರ ವ್ಯಾಪ್ತಿಯ ಫಾರಂ-3 ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಪ್ರಾದೇಶಿಕ ಕಚೇರಿ ಆಯುಕ್ತಾಲಯ ಮೂಲಕ ಇತ್ಯರ್ಥಪಡಿಸಲಾಗುವುದು ಎಂದು ಸಂಸದ ಕೆ.ರಾಜಶೇಖರ್ ಹಿಟ್ನಾಳ್ ಹೇಳಿದರು.
ನಗರದ ತಾಪಂ ಮಂಥನ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೇಂದ್ರ ಮತ್ತು ರಾಜ್ಯ ಮಟ್ಟದ ಯೋಜನೆಗಳ ಹೋಬಳಿ ಮಟ್ಟದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು. ನಗರದ ಹಕ್ಕುಪತ್ರ ವಂಚಿತರಾದವರ ಮಾಲೀಕತ್ವ ಸಮಸ್ಯೆಯಿಂದ ಾರಂ ನಂ.3 ವಿತರಣೆಯಲ್ಲಿ ವಿಳಂಬವಾಗಿದ್ದು, ಈ ಬಗ್ಗೆ ಪ್ರಾದೇಶಿಕ ಆಯುಕ್ತರಿಂದ ಮಾಹಿತಿ ಪಡೆಯಲಾಗುವುದು.
ನೈರ್ಮಲೀಕರಣ ಮತ್ತು ಕುಡಿವ ನೀರಿನ ಸಮಸ್ಯೆಗಳ ಪರಿಹಾರಕ್ಕೆ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಬೇಕಿದ್ದು, ಯೋಜನೆ ಅನುದಾನ ಸಮರ್ಪಕ ಬಳಸಿಕೊಳ್ಳಬೇಕು. ಅನುದಾನ ಬಿಡುಗಡೆಯಲ್ಲಿ ವಿಳಂಬವಾದರೆ ತಕ್ಷಣ ತಿಳಿಸಿ. ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು. ನಗರದ ತೆರಿಗೆ ಪ್ರಮಾಣ 20 ಕೋಟಿ ರೂ.ಗೆ ಹೆಚ್ಚಿಸಬೇಕಿದ್ದು, ಬಾಕಿ ತೆರಿಗೆ ವಸೂಲಿಗೆ ನಗರಸಭೆ ಸದಸ್ಯರು ಸಹಕರಿಸಬೇಕು. ತೆರಿಗೆ ಹೆಚ್ಚಳಕ್ಕಿಂತ, ವಸೂಲಿ ಪ್ರಮಾಣ ಹೆಚ್ಚಳಕ್ಕೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.
ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಪ್ರತಿಕ್ರಿಯಿಸಿ, ನಗರಸಭೆ ತೆರಿಗೆ ವಸೂಲಿ 12 ಕೋಟಿ ರೂ.ಗೆ ಹೆಚ್ಚಿಸಿದ್ದು, ಕುಡಿವ ನೀರು ಮತ್ತು ನೈರ್ಮಲೀಕರಣಕ್ಕಾಗಿ ಬಿಡುಗಡೆಯಾದ 12.35 ಕೋಟಿ ರೂ.ಗಳ ಪೈಕಿ 8.65 ಕೋಟಿ ರೂ. ಬಳಸಿಕೊಳ್ಳಲಾಗಿದೆ. ಉಳಿದ ಅನುದಾನ ಬಳಕೆಗೆ ಕ್ರಿಯಾಯೋಜನೆ ರೂಪಿಸಲಾಗಿದೆ. ಒಳಚರಂಡಿ ಯೋಜನೆ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸಲಹೆ ನೀಡಿದರು.
ಹನಿ ನೀರು ಸಿಕ್ಕಿಲ್ಲ: ಜಲಜೀವನ ಮಿಷನ್ ಯೋಜನೆಯಡಿ ತಾಲೂಕಿನ ಸಂಗಾಪುರ, ಮಲ್ಲಾಪುರ, ಆನೆಗೊಂದಿ, ಸಣಾಪುರ ವ್ಯಾಪ್ತಿಯಲ್ಲಿ ಕೈಗೊಂಡ ಕಾಮಗಾರಿ ಕಳಪೆಯಾಗಿದ್ದು, ಹನಿ ನೀರು ಸಿಕ್ಕಿಲ್ಲ ಎಂದು ವಿವಿಧ ಗ್ರಾಪಂ ಸದಸ್ಯರು ಮಾಹಿತಿ ನೀಡಿದರು. ಯೋಜನೆ ಅನುಷ್ಠಾನ ಸಂದರ್ಭದಲ್ಲಿ ಸಿದ್ಧಪಡಿಸಿದ ಕ್ರಿಯಾಯೋಜನೆ ಲೋಪದಿಂದ ಯೋಜನೆ ವಿಲವಾಗಿದ್ದು, ಬಾಕಿ ಕಾಮಗಾರಿಗಾಗಿ 145 ಕೋಟಿ ರೂ. ಯೋಜನೆಯ ಪ್ರಸ್ತಾವನೆ ಸರ್ಕಾರದ ಮುಂದಿದೆ. ಇನ್ನೂ ಅನುದಾನ ಬಿಡುಗಡೆಯಾಗಿಲ್ಲ ಎಂದು ಸಂಸದ ಕೆ.ರಾಜಶೇಖರ್ ಹಿಟ್ನಾಳ್ ಹೇಳಿದರು.
ನರೇಗಾ ಯೋಜನೆಯಡಿ ಈಗಾಗಲೇ 13.16 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದ್ದು, ಆಸ್ತಿ ಸೃಜನೆಗೆ ಒತ್ತು ನೀಡಲಾಗಿದೆ. ಶಾಲಾ ಮೈದಾನ, ಕಾಂಪೌಂಡ್, ಸ್ಮಶಾನ ಅಭಿವೃದ್ಧಿ, ಕೋಳಿ, ಕುರಿ ಶೆಡ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಎಂದು ನರೇಗಾ ಸಹಾಯಕ ನಿರ್ದೇಶಕ ಮಹಾಂತಗೌಡ ಪಾಟೀಲ್ ಮಾಹಿತಿ ನೀಡಿದರು. ಆನೆಗೊಂದಿ ಮತ್ತು ಸಣಾಪುರ ಗ್ರಾಪಂ ವ್ಯಾಪ್ತಿಯಲ್ಲಿ ವೈಜ್ಞಾನಿಕ ರೀತಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದ್ದು, ಎನ್‌ಜಿಒ ಸಹಕಾರ ಪಡೆಯಲಾಗಿದೆ. ತ್ಯಾಜ್ಯ ವಿಲೇವಾರಿಯಿಂದ ಆದಾಯವೂ ಬರುತ್ತಿದೆ. ಉಳಿದ ಗ್ರಾಪಂ ವ್ಯಾಪ್ತಿಗೂ ಯೋಜನೆ ವಿಸ್ತರಿಸಲು ಯೋಚಿಸಲಾಗಿದೆ ಎಂದು ತಾಪಂ ಇಒ ರಾಮರೆಡ್ಡಿ ಪಾಟೀಲ್ ಮಾಹಿತಿ ನೀಡಿದರು.
ಮೊಟಕುಗೊಂಡ ಚರ್ಚೆ: ಸಭೆಯ ಬಹುತೇಕ ಸಮಯ ನಗರದ ಸಮಸ್ಯೆಗಳಿಗೆ ಸೀಮಿತವಾಗಿದ್ದು, ಕೊನೆಗೂ ಇತ್ಯರ್ಥಕ್ಕೆ ಬರಲಾಗಲಿಲ್ಲ. ಪ್ರತ್ಯೇಕ ಸಭೆ ನಡೆಸಿ ವಿಸ್ತೃತವಾಗಿ ಚರ್ಚಿಸೋಣ ಎನ್ನುವ ಮೂಲಕ ಚರ್ಚೆಯನ್ನು ಸಂಸದ ಕೆ.ರಾಜಶೇಖರ್ ಹಿಟ್ನಾಳ್ ಮೊಟಕುಗೊಳಿಸಿದರು. ಜೆಜೆಎಂ ವೈಲ್ಯದ ಬಗ್ಗೆ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ದೂರದೇ, ಡಿಪಿಆರ್ ಸಮಸ್ಯೆಯಿಂದ ವಿಳಂಬವಾಗುತ್ತಿರುವ ಬಗ್ಗೆ ಸಂಸದರು ಸಭೆ ಗಮನಕ್ಕೆ ತಂದರು. ಇಲಾಖೆ ಸಮಸ್ಯೆಗಳಿಗೆ ಅಧಿಕಾರಿಗಳು ಉತ್ತರಿಸುವ ಬದಲು ಸಂಸದರೇ ಉತ್ತರ ನೀಡುವ ಮೂಲಕ ಅಚ್ಚರಿ ಮೂಡಿಸಿದರು. ನಗರಸಭೆ ಸಾಮಾನ್ಯ ಸಭೆಯಲ್ಲಿ ಒಳಚರಂಡಿ ಮತ್ತು ಕುಡಿವ ನೀರಿನ ಸಮಸ್ಯೆ ಬಗ್ಗೆ ಗದ್ದಲ ನಡೆಸುವ ನಗರಸಭೆ ಸದಸ್ಯರು, ಈ ಸಭೆಯಲ್ಲಿ ಮೌನಕ್ಕೆ ಜಾರಿದ್ದು ಅನುಮಾನಕ್ಕೆ ಕಾರಣವಾಯಿತು.
ನಗರಸಭೆ ವ್ಯಾಪ್ತಿಯಲ್ಲಿನ ಹಕ್ಕುಪತ್ರ ಸಮಸ್ಯೆ ಇತ್ಯರ್ಥಕ್ಕೆ ಪ್ರತ್ಯೇಕ ಸಭೆ ನಡೆಸಲಾಗುತ್ತಿದ್ದು, ಮಾಸಾಂತ್ಯಕ್ಕೆ ದಿನಾಂಕ ನಿಗದಿಗೊಳಿಸಲಾಗುವುದು. ತೆರಿಗೆ ಪ್ರಮಾಣ ಹೆಚ್ಚಳಕ್ಕೆ ನಗರಸಭೆ ಸದಸ್ಯರು ಗಮನಹರಿಸಲಿ.
ಕೆ.ರಾಜಶೇಖರ್ ಹಿಟ್ನಾಳ್ ಸಂಸದ, ಕೊಪ್ಪಳ ಲೋಕಸಭೆ
=======================