ಗಂಗಾವತಿ ತಾಪಂ ಮಂಥನ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕಿನ ವಿವಿಧ ವಿಷಯಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ತಾಲೂಕು ಉಸ್ತುವಾರಿ ಎನ್.ಮಹೇಶಬಾಬು ಶನಿವಾರ ಮಾತನಾಡಿದರು. ತಹಸೀಲ್ದಾರ್ ಯು.ನಾಗರಾಜ್, ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್ ಇತರರಿದ್ದರು.  
ಜಿಲ್ಲೆ

ಕುಡಿವ ನೀರಿನ ಸಮಸ್ಯೆ ಎದುರಾಗದಿರಲಿ

ಗಂಗಾವತಿ: ಇಲಾಖೆ ಯೋಜನೆಗಳನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು ಎಂದು ತಾಲೂಕು ಉಸ್ತುವಾರಿ ಎನ್.ಮಹೇಶಬಾಬು ಹೇಳಿದರು.

ನಗರದ ತಾಪಂ ಮಂಥನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕಿನ ವಿವಿಧ ವಿಷಯಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು. ಜನರ ಸೇವೆಗೆ ನಿಯೋಜನೆಗೊಂಡ ಅಧಿಕಾರಿಗಳು ಕರ್ತವ್ಯ ಲೋಪಕ್ಕೆ ಅವಕಾಶ ನೀಡದೇ ಸಕಾಲಕ್ಕೆ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಬೇಸಿಗೆ ಅವಧಿಯಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗಲಿದ್ದು, ಗ್ರಾಮೀಣ ಭಾಗದಲ್ಲಿ ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕು. ನೀರಿನ ಹಾಹಾಕಾರ ಎದುರಾಗದಂತೆ ಎಚ್ಚರಿಕೆವಹಿಸಬೇಕಿದ್ದು, ಸಮಸ್ಯೆಗಳಿಗೆ ಸ್ಪಂದಿಸಬೇಕೆಂದರು.

ಬಹುಪಾಲು ಅಂಗನವಾಡಿ ಕೇಂದ್ರಗಳು ಬಾಡಗಿ ಕಟ್ಟಡದಲ್ಲಿದ್ದು, ನಿರ್ವಹಣೆಗೆ ತೊಂದರೆಯಾಗಿದೆ. ಮೂಲ ಸೌಕರ್ಯ ಒದಗಿಸಲಾಗುತ್ತಿಲ್ಲ, ಬಾಡಿಗೆ ಹೊರೆಯಾಗುತ್ತಿದೆ. ಸ್ವಂತ ಕಟ್ಟಡಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕಿದ್ದು, ನಿವೇಶನ ಕಲ್ಪಿಸಬೇಕಿದೆ. ವಸತಿ ನಿಲಯಗಳಿಗೆ ತಹಸೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳು ಕಾಲಕಾಲಕ್ಕೆ ಭೇಟಿ ನೀಡಿ ವ್ಯವಸ್ಥೆ ಮತ್ತು ರಕ್ಷಣೆ ಪರಿಶೀಲಿಸಬೇಕು. ಮಹಿಳಾ ವಸತಿ ನಿಲಯದಲ್ಲಿ ಭದ್ರತಾ ಸಿಬ್ಬಂದಿ ಕೊರತೆಯಿದ್ದರೆ ಪೊಲೀಸರು ಗಸ್ತು ತಿರುಗುವ ಯೋಜನೆ ಹಾಕಿಕೊಳ್ಳಬೇಕೆಂದರು.

ಪಡಿತರ ಸಮರ್ಪಕ ವಿತರಣೆ, ವಿವಿಧ ಇಲಾಖೆಗಳ ಕಾಮಗಾರಿ ನಿರ್ವಹಣೆ ಕುರಿತು ತಾಲೂಕು ಮಟ್ಟದ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು. ತಹಸೀಲ್ದಾರ್ ಯು.ನಾಗರಾಜ್, ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ ಗೌಡರ್, ಶಿರಸ್ತೇದಾರ್ ರವಿಕುಮಾರ ನಾಯಕವಾಡಿ, ಸಿಡಿಪಿಒ ಜಯಶ್ರೀ ರಾಜಪುರೋಹಿತ್, ಜಿಪಂ ಎಇಇ ಕೆ.ವಿಜಯಕುಮಾರ, ಹಿಂದುಳಿದ ವರ್ಗಗಳ ಇಲಾಖೆ ವಿಸ್ತೀರ್ಣಾಧಿಕಾರಿ ಉಷಾ ಮುಜುಂದಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ಗೌರಿಶಂಕರ ಚಿತ್ರೀಕಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳಿದ್ದರು.