ಗಂಗಾವತಿ ತಾಲೂಕಿನ ಆನೆಗೊಂದಿ ವಾಲಿಕಿಲ್ಲಾ ಮ್ಯಾಗೋಟದ ಶ್ರೀ ಆದಿಶಕ್ತಿ ದೇವಾಲಯದ ಬೆಟ್ಟದಲ್ಲಿಟ್ಟಿದ್ದ ಬೋನಿಗೆ ಶುಕ್ರವಾರ ಬೆಳಗಿನ ಜಾವ ಬಿದ್ದಿರುವ ಚಿರತೆ. 
ಜಿಲ್ಲೆ

ಜನರ ನಿದ್ದೆಗೆಡಿಸಿದ್ದ ಚಿರತೆ ಬೋನಿಗೆ

ಗಂಗಾವತಿ: ತಾಲೂಕಿನ ಆನೆಗೊಂದಿ ವಾಲಿಕಿಲ್ಲಾ ಮ್ಯಾಗೋಟದ ಶ್ರೀ ಆದಿಶಕ್ತಿ ದೇವಾಲಯದ ಬೆಟ್ಟದಲ್ಲಿ ಇಟ್ಟಿದ್ದ ಬೋನಿಗೆ ಶುಕ್ರವಾರ ಬೆಳಗಿನ ಜಾವ ನರಭಕ್ಷಕ ಮೂರು ವರ್ಷದ ಹೆಣ್ಣು ಚಿರತೆ ಬಿದ್ದಿದೆ.

ಬೆಳಗಿನ ವೇಳೆ ಎಂದಿನಂತೆ ಪೂಜೆ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಸಿಬ್ಬಂದಿಗೆ ಚಿರತೆ ಬೋನಿಗೆ ಬಿದ್ದಿರುವುದು ಗೊತ್ತಾಗಿದೆ. ಚಿರತೆ ಸೆರೆಗಾಗಿ ಓರಿಸ್ಸಾ ಮೂಲದ ತಂಡ ತಾಲೂಕಿಗೆ ಆಗಮಿಸಿದ ಸಂದರ್ಭದಲ್ಲಿ ಚಿರತೆ ಸೆರೆ ಸಿಕ್ಕಿದ್ದು ಜನ ನಿರುಮ್ಮಳರಾಗಿದ್ದಾರೆ. ಇನ್ನು ಕಮಲಾಪುರದ ಅಟಲ್‌ಬಿಹಾರಿ ಜೂವಲಾಜಿಕಲ್ ಪಾರ್ಕ್ ತಜ್ಞರ ತಂಡ ಅರವಳಿಕೆ ಮದ್ದು ನೀಡಿ ಪ್ರಜ್ಞೆ ತಪ್ಪಿದ ನಂತರ ಬೆಟ್ಟದಿಂದ ಸುರಕ್ಷಿತವಾಗಿ ಕೆಳಕ್ಕಿಳಿಸಿದರು. ಆರೋಗ್ಯ ತಪಾಸಣೆ ನಡೆಸಿದ ನಂತರ ವಿಶೇಷ ವಾಹನದಲ್ಲಿ ಜೂವಲಾಜಿಕಲ್ ಪಾರ್ಕ್‌ಗೆ ಕೊಂಡಯ್ಯಲಾಯಿತು.

ಕಳೆದ ನಾಲ್ಕು ತಿಂಗಳಿಂದ ಚಿರತೆ ಹಾವಳಿ ಹೆಚ್ಚಿದ್ದು , ಅ. 9ರಂದು ಮಹಿಳೆಯ ಮೇಲೆ, ಅ.17ರಂದು ಹೈದರಾಬಾದ್ ಬಾಲಕನ ಮೇಲೆ ಮತ್ತು ನ.4ರಂದು ವಾಲಿಕಿಲ್ಲಾ ಮ್ಯಾಗೋಟದ ಅಡುಗೆದಾರನ ಮೇಲೆ ಚಿರತೆ ದಾಳಿ ನಡೆಸಿ, ಒಬ್ಬನನ್ನು ತಿಂದು ಹಾಕಿತ್ತಲ್ಲದೆ, ವಿರುಪಾಪುರಗಡ್ಡಿ ಮತ್ತು ಆದಿಶಕ್ತಿ ದೇವಾಲಯದ ಬಳಿ ಗೋಶಾಲೆಯತ್ತ ಆಕಳು ಮೇಲೆ ದಾಳಿ ನಡೆಸಿತ್ತು. ಡಿ.12ರಂದು ತಾಲೂಕಿನ ಸಂಗಾಪುರದದಲ್ಲಿ ಬಾಲಕನೊಬ್ಬನ ಮೇಲೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿತ್ತು. ಇನ್ನೆರಡು ಚಿರತೆಗಳಿರುವ ಬಗ್ಗೆ ಮಾಹಿತಿ ದೊರೆತಿದೆ. ಚಿರತೆಗಳ ಸೆರೆಗಾಗಿ 9 ಬೋನುಗಳ ವ್ಯವಸ್ಥೆ ಮಾಡಲಾಗಿದೆ. ಅರಣ್ಯ ರಕ್ಷಕ ಎಂ.ಶ್ರೀನಿವಾಸ, ಮಾರುತಿ ಇತರರಿದ್ದರು.

ಆನೆಗೊಂದಿ ಭಾಗದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಿದ್ದು, ಶಾಶ್ವತ ಪರಿಹಾರಕ್ಕಾಗಿ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. | ಶಿವರಾಜ ಮೇಟಿ, ತಾಲೂಕು ಅರಣ್ಯಾಧಿಕಾರಿ, ಗಂಗಾವತಿ