ಗಂಗಾವತಿ ನಗರ ಠಾಣೆ ಸಭಾಂಗಣದಲ್ಲಿ ಮೊಹರಂ ನಿಮಿತ್ತ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ಶುಕ್ರವಾರ ಮಾತನಾಡಿದರು. ನಗರ ಪಿಐ ಪ್ರಕಾಶ ಎಲ್. ಮಾಳಿ, ಪಿಎಸ್‌ಐ ಜಿ.ಟಿ.ನಾಗರಾಜ್, ನಗರಸಭೆ ವ್ಯವಸ್ಥಾಪಕ ಷಣ್ಮುಖಪ್ಪ ಇತರರಿದ್ದರು. 
ಜಿಲ್ಲೆ

ಅಹಿತಕರ ಘಟನೆಗಳಿಗೆ ಆಯೋಜಕರೇ ಹೊಣೆ

ಗಂಗಾವತಿ: ಮೊಹರಂ ಹಬ್ಬವನ್ನು ಶಾಂತಿ ಮತ್ತು ಭಾವೈಕ್ಯದಿಂದ ಆಚರಿಸಬೇಕಿದ್ದು, ಅಹಿತಕರ ಘಟನೆ ಕಂಡು ಬಂದಲ್ಲಿ ಪೀರಲ ದೇವರ ಪ್ರತಿಷ್ಠಾಪನೆ ಸಮಿತಿಯವರನ್ನೇ ಹೊಣೆಯನ್ನಾಗಿ ಮಾಡಲಾಗುವುದು ಎಂದು ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ಹೇಳಿದರು.

ನಗರ ಠಾಣೆ ಸಭಾಂಗಣದಲ್ಲಿ ಮೊಹರಂ ಹಬ್ಬದ ನಿಮಿತ್ತ ಪೊಲೀಸ್ ಇಲಾಖೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು. ಸೌಹಾರ್ದಯುತ ಹಬ್ಬದಾಚರಣೆಗೆ ಪೊಲೀಸ್ ಇಲಾಖೆ ಸಹಕರಿಸುತ್ತಿದ್ದು, ಸೂಕ್ತ ಬಂದೋಬಸ್ತ್ ಆಯೋಜಿಸಲಾಗುವುದು. ಸಣ್ಣಪುಟ್ಟ ಗಲಾಟೆ ಸಂಭವಿಸುವ ಬಗ್ಗೆ ಮಾಹಿತಿ ಸಿಕ್ಕರೆ ಕೂಡಲೇ ಪೊಲೀಸ್ ಇಲಾಖೆ ಗಮನಕ್ಕೆ ತರಬೇಕು. ಆಯಾ ಪ್ರತಿಷ್ಠಾಪನೆ ಸಮಿತಿಯವರೇ ಯುವಕರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕಿದ್ದು, ನಿರ್ಲಕ್ಷಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಶಾಂತಿಯುತ ಹಬ್ಬದಾಚರಣೆಗೆ ಸಂಬಂಧಪಟ್ಟ ಇಲಾಖೆಯಿಂದ ವ್ಯವಸ್ಥೆ ಮಾಡಲಾಗುತ್ತಿದ್ದು, ಸಂಚಾರ ನಿಯಂತ್ರಣ ಮತ್ತು ವಿದ್ಯುತ್ ಸಮಸ್ಯೆ ಪರಿಹರಿಸಲಾಗುವುದು ಎಂದರು.

ನಗರ ಪಿಐ ಪ್ರಕಾಶ ಎಲ್. ಮಾಳಿ ಮಾತನಾಡಿ, ಈ ಹಿಂದೆ ನಡೆದ ಅಹಿತಕರ ಘಟನೆಯಿಂದ ನಗರದ ವಿರುಪಾಪುರತಾಂಡಾ ಸೇರಿ ಗ್ರಾಮೀಣ ಭಾಗದ ಕೆಲ ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅದರಂತೆ ಸ್ಥಳೀಯವಾಗಿ ಕಂಡು ಬಂದಲ್ಲಿ ಮುಂದಿನ ವರ್ಷ ನಿಷೇಧಾಜ್ಞೆಗೆ ಒಳಗಾಗಬೇಕಾತ್ತದೆ. ದನ್ ಸಂದರ್ಭದಲ್ಲಿ ಗಾಂಧಿ

ವೃತ್ತದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಿದರೆ ಮುಜಾವರ್‌ಗಳ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಷ್ಠಾಪನೆ ಸ್ಥಳದಲ್ಲಿ ಸ್ವಚ್ಛತೆ, ವಿದ್ಯುತ್, ಕುಡಿವ ನೀರಿನ ವ್ಯವಸ್ಥೆ ಕೈಗೊಳ್ಳಲಾಗುವುದು. ಪ್ರಮುಖ ರಸ್ತೆಯಲ್ಲಿ ಸಂಚಾರ ನಿಯಂತ್ರಣಕ್ಕೆ ಪೊಲೀಸ್ ಬಂದೋಬಸ್ತ್ ಸೇರಿ ವಿವಿಧ

ವ್ಯವಸ್ಥೆ ಕೈಗೊಳ್ಳುವಂತೆ ಮುಜಾವರ್‌ಗಳು ಮನವಿ ಮಾಡಿದರು.

ನಗರಸಭೆ ವ್ಯವಸ್ಥಾಪಕ ಷಣ್ಮುಖಪ್ಪ, ಪಿಎಸ್‌ಐ ಜಿ.ಟಿ.ನಾಗರಾಜ್, ಮುಖಂಡರಾದ ಚಿನ್ನಪ್ಪ, ಮೇಹರಾಜ್, ಹನುಮಂತಪ್ಪ, ಸೈಯದ್ ಹೈದರ್, ಪೀರ್‌ಸಾಬ್ ಇತರರಿದ್ದರು.