ಗಂಗಾವತಿ: ಇಲ್ಲಿನ ನಗರಸಭೆ ವಿವಿಧ ಸ್ಥಾಯಿ ಸಮಿತಿಯ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದ್ದು, ನಗರಸಭೆ ಇತಿಹಾಸದಲ್ಲಿ ಮೊದಲ ಬಾರಿಗೆ ನಾಲ್ವರು ಅಧ್ಯಕ್ಷರು ಸೋಮವಾರ ಆಯ್ಕೆಗೊಂಡರು.
35 ಸದಸ್ಯರನ್ನೊಳಗೊಂಡ ನಗರಸಭೆಯಲ್ಲಿ ಬಿಜೆಪಿ ಆಡಳಿತದಲ್ಲಿದ್ದು, ಸ್ಥಾಯಿ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿರಲಿಲ್ಲ. ಶಾಸಕ ಗಾಲಿ ಜನಾರ್ದನರೆಡ್ಡಿ ಸೂಚನೆಯಂತೆ ಸ್ಥಾಯಿ ಸಮಿತಿಗೆ 9 ಸದಸ್ಯರನ್ನು ನೇಮಕ ಮಾಡಲಾಗಿತ್ತು. ನಗರಸಭೆ ಸಭಾಂಗಣದಲ್ಲಿ ಜರುಗಿದ ಆಯ್ಕೆ ಸಭೆಯಲ್ಲಿ ತೆರಿಗೆ ನಿರ್ಧರಣೆ ಹಣಕಾಸು ಮತ್ತು ಅಪೀಲುಗಳ ಸಮಿತಿಗೆ ಎಂ.ಡಿ.ಉಸ್ಮಾನ್, ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿಗೆ ವಾಸುದೇವರಾವ್ ನವಲಿ, ಪಟ್ಟಣ ಯೋಜನೆ ಮತ್ತು ಪುರೋಭಿವೃದ್ಧಿ ಸಮಿತಿಗೆ ರಮೇಶ ಚೌಡ್ಕಿ ಮತ್ತು ಲೆಕ್ಕಪತ್ರಗಳ ಸಮಿತಿಗೆ ಎಸ್.ಉಮೇಶ ಸಿಂಗನಾಳ್‌ರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ನಗರಸಭೆ ಅಧ್ಯಕ್ಷೆ ಹೀರಾಬಾಯಿ ಸಿಂಗ್ ಮತ್ತು ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಆಯ್ಕೆ ಪ್ರಕ್ರಿಯೆ ನಿರ್ವಹಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಯ ಬಗ್ಗೆ ವಾರದ ಮುನ್ನವೇ ನೋಟಿಸ್ ಜಾರಿ ಮಾಡಿದ್ದು, ಬೆಳಗ್ಗೆ 11ಗಂಟೆಗೆ ನಿಗದಿಯಾಗಿತ್ತು. ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಲೇಟಾಗಿ ಬಂದಿದ್ದರಿಂದ 12.30ಕ್ಕೆ ನಿರ್ವಹಿಸಲಾಯಿತು. ಆರಂಭದಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದರೂ, ಸಮಿತಿಗಳನ್ನು ಬಹಿರಂಗಪಡಿಸಿರಲಿಲ್ಲ. ಶಾಸಕ ಗಾಲಿ ಜನಾರ್ದನರೆಡ್ಡಿ ಅಧಿವೇಶನದಲ್ಲಿ ಪಾಲ್ಗೊಂಡಿದ್ದರಿಂದ ಸಂಜೆಯಾದರೂ ಅಂತಿಮಗೊಳ್ಳಲಿಲ್ಲ. ಆಯ್ಕೆಯಾದ ಅಧ್ಯಕ್ಷರು ಗೊಂದಲದಲ್ಲಿದ್ದು, ಸ್ಪಷ್ಪತೆಯಿರಲಿಲ್ಲ, ಹೇಳಿಕೆ ನೀಡಲು ಒಪ್ಪಲಿಲ್ಲ. ಕೊನೆಗೂ ರಾತ್ರಿ ಹೊತ್ತಿಗೆ ಅಂತಿಮಗೊಳಿಸಲಾಯಿತು. ಹಣಕಾಸು ಸಮಿತಿಗೆ ಮಾತ್ರ ಕೊಠಡಿಯಿದ್ದು, ಉಳಿದ ಸಮಿತಿ ಅಧ್ಯಕ್ಷರಿಗೆ ಕೊಠಡಿ ಮತ್ತು ಡಿ ಗ್ರೂಪ್ ಸಿಬ್ಬಂದಿ ನಿಯೋಜನೆ ಸಮಸ್ಯೆ ಎದುರಾಗಿದೆ. ನಗರಸಭೆ ಸದಸ್ಯರ ಆಡಳಿತ ಅವಧಿ 3 ತಿಂಗಳ ಮಾತ್ರವಿದ್ದು, ಸದಸ್ಯರ ಸಮಾಧಾನಕ್ಕಾಗಿ ಅಧ್ಯಕ್ಷ ಸ್ಥಾನ ನೀಡಲಾಗಿದೆ.