ಗಂಗಾವತಿ: ಬಾಡಿಗೆ ನೀಡದ ನಗರದ ಬಸ್ ನಿಲ್ದಾಣ ಬಳಿಯ ಟಿಎಪಿಸಿಎಂಎಸ್ ಜಾಗದಲ್ಲಿನ ಹೋಟೆಲ್ ಶೆಡ್‌ನ್ನು ಪೊಲೀಸರ ನೆರವಿನೊಂದಿಗೆ ಬುಧವಾರ ತೆರವುಗೊಳಿಸಿದ್ದು, ಬಿಗಿಬಂದೋಬಸ್ತ್ ಆಯೋಜಿಸಲಾಗಿತ್ತು.
ಟಿಎಪಿಸಿಎಂಎಸ್‌ಗೆ ಸೇರಿದ ಜಾಗದಲ್ಲಿ ಕಳೆದ 7 ವರ್ಷಗಳಿಂದ ಶೆಡ್‌ಹಾಕಲಾಗಿದ್ದು, ನಾನಿ ಎಂಬಾತ ಹೋಟೆಲ್ ನಡೆಸುತ್ತಿದ್ದ. ಕಳೆದ ಏಳು ವರ್ಷಗಳಿಂದಲೂ ಬಾಡಿಗೆ ನೀಡಿಲ್ಲ, ಸೊಸೈಟಿಯಿಂದ ಯಾವುದೇ ಮಂಜೂರಾತಿ ಪತ್ರ ಪಡೆದಿರಲಿಲ್ಲ. ಉದ್ದೇಶಿತ ಜಾಗವು ಜ.1, 2024ರಲ್ಲಿ ದೀಪಾ ರಾಮಚಂದ್ರ ಎಂಬುವರಿಗೆ ಮಂಜೂರಾಗಿದ್ದು, ತಿಂಗಳಿಗೆ 1850ರೂ.ಗಳಂತೆ ಟಿಎಪಿಸಿಎಂಎಸ್‌ನಿಂದ ಕರಾರು ಪತ್ರ ಬರೆದು ಕೊಡಲಾಗಿತ್ತು.
ಜಾಗಕ್ಕಾಗಿ ವಾರಸುದಾರರು ಮತ್ತು ಸೊಸೈಟಿ ಸಿಬ್ಬಂದಿ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಕೊನೆಗೂ ಪ್ರಕರಣ ಪೊಲೀಸ್ ಮೆಟ್ಟಿಲೇರಿದ್ದು, ಪೊಲೀಸ್ ಬಂದೋಬಸ್ತ್‌ನಲ್ಲಿ ಹೋಟೆಲ್ ಮತ್ತು ಇದರಲ್ಲೇ ವಾಸವಿದ್ದ ಕುಟುಂಬವನ್ನು ಹೊರ ಕಳುಹಿಸಿ ವಸ್ತುಗಳನ್ನು ತೆರವುಗೊಳಿಸಲಾಯಿತು.
ಹೋಟೆಲ್ ಮಾಲೀಕ ನಾನಿ ಪ್ರತಿಕ್ರಿಯಿಸಿ, ಜಾಗದ ವಾರಸುದಾರರಿಗೆ ಈವರೆಗೆ 3.40ಲಕ್ಷ ರೂ.ನೀಡಿದ್ದು, ಈ ಬಗ್ಗೆ ಸಿಬ್ಬಂದಿ ಗಮನಕ್ಕೆ ತಂದಿದ್ದೇನೆ. ಪೊಲೀಸರ ಮೂಲಕ ನಮ್ಮ ಕುಟುಂಬವನ್ನು ಹೆದರಿಸುತ್ತಿದ್ದು, ವಾಸಿಸಲು ಮನೆಯಿಲ್ಲದಂತಾಗಿದೆ ಎಂದರು.
ಟಿಎಪಿಸಿಎಂಎಸ್ ವ್ಯವಸ್ಥಾಪಕ ಶಂಕರ ಮಾತನಾಡಿ, ಜಾಗ ಇನ್ನೊಬ್ಬರಿಗೆ ಮಂಜೂರಾಗಿದ್ದು, ಒಪ್ಪಂದ ಪತ್ರವಿದೆ. ಜಾಗ ಸ್ವಯಂ ತೆರವಿಗೆ ಹಲವು ಬಾರಿ ಅವಕಾಶ ನೀಡಿದರೂ ಸ್ಪಂದಿಸರಲಿಲ್ಲ. ಅನಿವಾರ್ಯವಾಗಿ ಪೊಲೀಸರ ನೆರವಿನೊಂದಿಗೆ ತೆರವುಗೊಳಿಸಲಾಯಿತು ಎಂದರು.