ಗಂಗಾವತಿ: ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ರೈಲ್ವೆ ಯೋಜನೆಗಳ ವಿಸ್ತಾರ ಮತ್ತು ಹೆದ್ದಾರಿಗಳ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಸಂಸದ ಕೆ.ರಾಜಶೇಖರ ಹಿಟ್ನಾಳ ಹೇಳಿದರು.
ನಗರದಲ್ಲಿ ಔಷಧ ವ್ಯಾಪಾರಿಗಳ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ಔಷಧ ಕಾನೂನು ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ದರೋಜಿಯಿಂದ ಬಾಗಲಕೋಟೆವರೆಗೂ ಬ್ರಾಡ್‌ಗೇಜ್ ರೈಲ್ವೆ ಮಾರ್ಗದ ರಚನೆ, ಬೂದಗುಂಪಾ ಕ್ರಾಸ್‌ನಿಂದ ಬಳ್ಳಾರಿ ನಗರದವರೆಗಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು. ಸಿಂಧನೂರು ನಗರದಿಂದ ಹುಬ್ಬಳ್ಳಿಗೆ ಸಂಚರಿಸುವ ಎರಡು ರೈಲುಗಳಲ್ಲಿ ಒಂದನ್ನು ಧಾರವಾಡ ಮತ್ತು ಗೋವಾದವರೆಗೂ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಅಶೋಕಸ್ವಾಮಿ ಹೇರೂರು ಮಾತನಾಡಿ, ಹಿಟ್ನಾಳ ಬಳಿ ಟೋಲ್ ಪ್ಲಾಜಾಗಳಲ್ಲಿ ಶೌಚಗೃಹ ದುರಸ್ತಿ ಮತ್ತು ಅವೈಜ್ಞಾನಿಕ ಹಂಪ್ಸ್ ಗಳನ್ನು ತೆರವುಗೊಳಿಸಬೇಕಿದ್ದು, ರೈಲ್ವೆ ಯೋಜನೆಗಳನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದರು.
ವಿವಿಧ ಯೋಜನೆಗಳ ಅನುಷ್ಟಾನಕ್ಕಾಗಿ ಸಂಸ್ಥೆಯಿಂದ ಮನವಿ ಸಲ್ಲಿಸಲಾಯಿತು. ಬಿಎಸ್‌ಸಿ ಅಗ್ರಿಯಲ್ಲಿ ಚಿನ್ನದ ಪದಕ ಪಡೆದು, ಎಂಎಸ್‌ಸಿ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಸಂಗೀತಾ ಮಲ್ಲಿಕಾರ್ಜುನ ಅವರನ್ನು ಸನ್ಮಾನಿಸಲಾಯಿತು.
ಪಿಎಸ್ಸೆಸ್ಸೆನ್ ನಿರ್ದೇಶಕ ವಿಶ್ವನಾಥ ಕೇಸರಹಟ್ಟಿ, ಪ್ರಮುಖರಾದ ರಮೇಶ ಬಾಬು, ಎಸ್.ಗಣೇಶ, ಎಸ್.ಮಂಜುನಾಥ, ಅರಳಿ ಅಮರೇಶ ಕಾರಟಗಿ, ಶರಣಪ್ಪ ಬೆಟಗೇರಿ, ಉದ್ಯಮಿ ಮುಷ್ಟಿ ವಿರೂಪಾಕ್ಷಪ್ಪ, ಹನುಮರೆಡ್ಡೆಪ್ಪ ಮಾಲಿ ಪಾಟೀಲ್, ವೀರಣ್ಣ ಕಾರಂಜಿ, ಸಂಧ್ಯಾ ಪಾರ್ವತಿ, ರಾಜಶೇಖರಯ್ಯ ಭಾನಾಪೂರ, ಕಲ್ಯಾಣರಾವ್, ಸಿ.ಚಿದಾನಂದ ಇತರರಿದ್ದರು.