ನಾಪತ್ತೆಯಾದ ಬಾಲಕನ ಶೋಧಕ್ಕಾಗಿ ಗಂಗಾವತಿ ದುರ್ಗಮ್ಮನಹಳ್ಳದಲ್ಲಿ ಕಾರ್ಯಾಚರಣೆ ನಡೆಸಿರುವ ತೋರಣಗಲ್ ಜಿಂದಾಲ್‌ನ ರಕ್ಷಣಾ ತಂಡ ಮತ್ತು ಪೌರ ಕಾರ್ಮಿಕರು.  
ಜಿಲ್ಲೆ

ಬಾಲಕನಿಗಾಗಿ ಜಿಂದಾಲ್ ರಕ್ಷಣಾ ತಂಡ ಶೋಧ

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ನಾಪತ್ತೆಯಾದ ಬಾಲಕನ ಹುಡುಕಾಟ ಎರಡನೇ ದಿನವಾದ ಸೋಮವಾರವೂ ಮುಂದುವರಿದಿದ್ದು, ಜಿಂದಾಲ್ ಕಂಪನಿಯ ರಕ್ಷಣಾ ತಂಡದ ನೆರವು ಪಡೆಯಲಾಗಿದೆ.

ನಗರದ ಮಹೆಬೂಬ್ ನಗರದ ಮಹ್ಮದ್ ಅಜಾನ್ ದುರ್ಗಮ್ಮನಹಳ್ಳದ ಕಿರುಸೇತುವೆಯಲ್ಲಿ ಬಿದ್ದು ನಾಪತ್ತೆಯಾಗಿದ್ದು, ಹಳ್ಳದಲ್ಲಿ ಬೀಳುತ್ತಿರುವುದು ಸಮೀಪದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪತ್ತೆಗಾಗಿ ಆನೆಗೊಂದಿ ಅನುಭವಿ ಈಜುಗಾರರ ತಂಡ ಮತ್ತು ಅಗ್ನಿಶಾಮಕ ಸಿಬ್ಬಂದಿ ನೆರವು ಪಡೆಯಲಾಗಿತ್ತು.

ಪತ್ತೆಯಾಗದಿದ್ದರಿಂದ ತೋರಣಗಲ್‌ನ ಜಿಂದಾಲ್ ರಕ್ಷಣಾ ತಂಡ ಕರೆಯಿಸಲಾಗಿದ್ದು, ಐವರನ್ನೊಳಗೊಂಡ ತಂಡ ಹಳ್ಳಕ್ಕಿಳಿದು ಶೋಧ ಕಾರ್ಯ ನಡೆಸುತ್ತಿದೆ. ಅವರೊಂದಿಗೆ ಈಜುಗಾರರ ತಂಡ ಮತ್ತು ಪೌರ ಕಾರ್ಮಿಕರು ಸಾಥ್ ನೀಡಿದ್ದು, ಹಳ್ಳದಲ್ಲಿ ತ್ಯಾಜ್ಯ ತೆರವಿಗೆ ಹಿಟಾಚಿ ಮತ್ತು ಜೆಸಿಬಿ ಯಂತ್ರ ಬಳಸಲಾಗುತ್ತಿದೆ.

ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಪ್ರತಿಕ್ರಿಯಿಸಿ, ಪತ್ತೆಗಾಗಿ ಹಲವು ಪ್ರಯತ್ನಗಳನ್ನು ಮಾಡಲಾಗುತ್ತಿದ್ದು, ರಕ್ಷಣಾ ತಂಡ ಕರೆಯಿಸಲಾಗಿದೆ ಎಂದರು. ನಗರಸಭೆ ಸದಸ್ಯ ಮನೋಹರಸ್ವಾಮಿ ಹಿರೇಮಠ, ಖಾಸಿಂಸಾಬ್ ಗದ್ವಾಲ್, ಪರಿಸರ ಇಂಜಿನಿಯರ್ ಚೇತನನಾಯ್ಕ, ಆರೋಗ್ಯ ನಿರೀಕ್ಷಕ ಎ.ನಾಗರಾಜ್, ಜಿಂದಾಲ್ ರಕ್ಷಣಾ ತಂಡದ ಮುಖ್ಯಸ್ಥ ಆನಂದ ಇತರರಿದ್ದರು.