ಗಂಗಾವತಿ: ಸಂಭವನೀಯ ರೋಗಗಳನ್ನು ತಡೆಯಲು ಪ್ಲಾಸ್ಟಿಕ್ ಮುಕ್ತ ನಗರ ನಿರ್ಮಾಣಕ್ಕೆ ಪ್ರತಿಯೊಬ್ಬರ ಸಹಕಾರ ಮುಖ್ಯ ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಹೇಳಿದರು.
ನಗರದ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ನಗರಸಭೆ, ತಾಲೂಕು ಕಾನೂನು ನೆರವು ಸಮಿತಿ, ಚಾರಣ ಬಳಗದಿಂದ ಪ್ಲಾಸ್ಟಿಕ್ ಮುಕ್ತ ನಗರಕ್ಕಾಗಿ ಬುಧವಾರ ಹಮ್ಮಿಕೊಂಡಿದ್ದ ಜಾಗೃತಿ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಮಣ್ಣಿನಲ್ಲಿ ಕರಗದ ಪ್ಲಾಸ್ಟಿಕ್ ಬಳಕೆಯಿಂದ ಹಲವು ರೋಗಗಳಿಗೆ ಆಹ್ವಾನ ನೀಡಿದಂತಾಗಲಿದೆ. ಪರಿಸರ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ಅಪರಾಧವಾಗಿದ್ದು, ಕಾನೂನಿನಲ್ಲಿ ಶಿಕ್ಷೆಯಿದೆ. ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಸರ್ವರೂ ಕೈ ಜೋಡಿಸಬೇಕಿದ್ದು, ಮಾ.31ರೊಳಗೆ ಪ್ಲಾಸ್ಟಿಕ್ ನಿಷೇಧವಾಗಬೇಕು. ಪ್ರತಿಯೊಬ್ಬರೂ ಸ್ವಯಂ ಪ್ರೇರಣೆಯಿಂದ ಪ್ಲಾಸ್ಟಿಕ್ ನಿಷೇಧ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಿದರು.
ಜೆಎಂಎ್ಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ರಮೇಶ ಗಾಣಿಗೇರ್ ಮಾತನಾಡಿ, ಅಂಗಡಿಗಳಲ್ಲಿ ಪ್ಲಾಸ್ಟಿಕ್ ಪ್ರೇರಿತ ವಸ್ತುಗಳ ಮಾರಾಟ ನಿಷೇಧವಾಗಬೇಕಿದ್ದು, ಪರಿಸರ ಪೂರಕವಾದ ವಸ್ತುಗಳನ್ನು ಬಳಸಲು ಸಾರ್ವಜನಿಕರು ಅಸಕ್ತಿವಹಿಸಬೇಕು. ನಿಷೇಧಿತ ಪ್ಲಾಸ್ಟಿಕ್ ಬಳಸುವ ಮತ್ತು ಮಾರಾಟಗಾರರ ಮೇಲೆ ಪ್ರಕರಣ ದಾಖಲಾದರೇ, ದಂಡದೊಂದಿಗೆ ಜೈಲು ಶಿಕ್ಷೆಯೂ ಅನುಭವಿಸಬೇಕಾಗಬಹುದು ಎಂದರು.
ಪ್ಲಾಸ್ಟಿಕ್ ಬಳಕೆಯಿದ ಪರಿಸರ ಮತ್ತು ಆರೋಗ್ಯದ ಮೇಲಾಗುವ ಪರಿಣಾಮ ಕುರಿತು ಚಾರಣ ಬಳಗದ ಸಂಚಾಲಕ ಡಾ.ಶಿವಕುಮಾರ ಮಾಲಿ ಪಾಟೀಲ್ ಮಾತನಾಡಿದರು. ನಗರದ ಶ್ರೀಕೃಷ್ಣ ದೇವರಾಯ ವೃತ್ತದಿಂದ ಗಾಂಧಿ ವೃತ್ತದವರಿಗೂ ಅಭಿಯಾನ ನಡೆಯಿತು. ಜೆಎಂಎ್ಸಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ್, ವಕೀಲರ ಸಂಘದ ತಾಲೂಕಾಧ್ಯಕ್ಷ ಎಸ್.ಎನ್. ನಾಯಕ, ನಗರಸಭೆ ಅಧ್ಯಕ್ಷ ಮೌಲಸಾಬ್ ದಾದೇಸಾಬ್, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ಸದಸ್ಯರಾದ ವಾಸುದೇವ ನವಲಿ, ಸುಚೇತಾಶಿರಿಗೇರಿ, ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ, ಕಾನೂನು ಸಲಹೆಗಾರ್ತಿ ರಾಜೇಶ್ವರಿ ಸುರೇಶ, ಹಾಸ್ಯ ಭಾಷಣಕಾರ ಗಂಗಾವತಿ ಬೀಚಿ ಬಿ.ಪ್ರಾಣೇಶ, ಹಿರಿಯ ವೈದ್ಯರಾದ ಜಿ.ಚಂದ್ರಪ್ಪ, ಎ.ಸೋಮರಾಜು, ಕನ್ನಡ ಪರ ಸಂಘಟನೆ ಪದಾಧಿಕಾರಿಗಳಾದ ಬಳ್ಳಾರಿ ರಾಮಣ್ಣನಾಯಕ, ಪಂಪಣ್ಣನಾಯಕ, ಅರ್ಜುನ ನಾಯಕ, ವಿರುಪಾಕ್ಷಗೌಡನಾಯಕ, ಚನ್ನಬಸವ ಜೇಕಿನ್ ಸೇರಿ ವಿವಿಧ ಸಂಘಟನೆ ಪದಾಧಿಕಾರಿಗಳು ಭಾಗವಹಿಸಿದ್ದರು.