ಜಿಲ್ಲೆ

ಅಕ್ರಮ ಪೈಪ್‌ಲೈನ್‌ಗೆ ಅಧಿಕಾರಿಗಳೇ ಸಾಥ್; ಚಾಮರಸ ಮಾಲಿ ಪಾಟೀಲ್ ಆರೋಪ

ಕೊಪ್ಪಳ ಜಿಲ್ಲೆಯ ಮಾಜಿ ಸಚಿವರು, ಮಾಜಿ ಶಾಸಕರು ನೀರು ಕಳವಿನ ಪ್ರಕರಣದಲ್ಲಿ ಭಾಗಿ


ಗಂಗಾವತಿ: ಜಲಸಂಪನ್ಮೂಲ ಅಧಿಕಾರಿಗಳ ನಿರ್ಲಕ್ಷ್ಯದಿಂದ ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯಲ್ಲಿ ನೀರು ಕಳವು ಪ್ರಕರಣ ಹೆಚ್ಚುತ್ತಿದ್ದು, ಯಾವುದೇ ಕಾರಣಕ್ಕೂ ಆ.6ರಂದು ಹಮ್ಮಿಕೊಂಡ ಪೈಪ್‌ಲೈನ್ ತೆರವು ಪ್ರತಿಭಟನೆ ಹಿಂಪಡೆಯಲ್ಲ ಎಂದು ತುಂಗಭದ್ರಾ ಎಡದಂಡೆ ನಾಲೆ ರೈತ ಹಿತರಕ್ಷಣಾ ಸಮಿತಿ ಸಂಚಾಲಕ ಹಾಗೂ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಸ್ಪಷ್ಟಪಡಿಸಿದರು.

ನಗರದ ತಾಪಂ ಮಂಥನ ಸಭಾಂಗಣದಲ್ಲಿ ಜಲಸಂಪನ್ಮೂಲ ಮತ್ತು ಕಂದಾಯ ಇಲಾಖೆ ಮಂಗಳವಾರ ಆಯೋಜಿಸಿದ್ದ ಜನಪ್ರತಿನಿಧಿಗಳು ಮತ್ತು ರೈತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಟೇಲ್ಯಾಂಡ್ ರೈತರ ಸಮಸ್ಯೆ ಪರಿಹರಿಸುವಂತೆ ಸಿಎಂ ಯಡಿಯೂರಪ್ಪ ಲಿಖಿತವಾಗಿ ಆದೇಶಿಸಿದರೂ ಅಧಿಕಾರಿಗಳು ಗಮನಹರಿಸಿಲ್ಲ. ಅಕ್ರಮಕ್ಕೆ ಕುಮ್ಮಕ್ಕು ನೀಡುತ್ತಿರುವ ಅಧಿಕಾರಿಗಳನ್ನು ಕರ್ತವ್ಯದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ನೀರು ಕಳವು ವಿಚಾರದಲ್ಲಿ ಜಲಸಂಪನ್ಮೂಲ ಅಧಿಕಾರಿಗಳ ಕುಮ್ಮಕ್ಕು ಕುರಿತು ರೈತ ಹೋರಾಟಗಾರ ಚಾಮರಸಪಾಟೀಲ್ ಎಳೆಎಳೆಯಾಗಿ ಬಿಚ್ಚಿಟ್ಟರು. ಕೊಪ್ಪಳ ಜಿಲ್ಲೆಯ ಮಾಜಿ ಸಚಿವರು ಮತ್ತು ಮಾಜಿ ಶಾಸಕರು ನೀರು ಕಳವಿನ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.

ತುಂಗಭದ್ರಾ ಬೋರ್ಡ್ ಸಿಇಒ ಮಂಜಪ್ಪ ಮಾತನಾಡಿ, 417 ರೈತರಿಗೆ ನೋಟಿಸ್ ಜಾರಿ ಮಾಡಿದ್ದು, 195 ಪೈಪ್‌ಲೈನ್‌ಗಳನ್ನು ಈವರೆಗೂ ತೆರವುಗೊಳಿಸಿದ್ದು, 22 ರೈತರ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದರು.

ಸಹಾಯ ಆಯುಕ್ತ ನಾರಾಯಣರೆಡ್ಡಿ, ಡಿವೈಎಸ್ಪಿ ಡಾ.ಬಿ.ಪಿ.ಚಂದ್ರಶೇಖರ್, ತಹಸೀಲ್ದಾರ್ ಎಪಿಎಂಸಿ ಅಧ್ಯಕ್ಷ ಚಂದ್ರೇಗೌಡ, ಕಾರಟಗಿ ಎಪಿಎಂಸಿ ಅಧ್ಯಕ್ಷ ಸೋಮಶೇಖರ ಮುಷ್ಟೂರು, ಜಿಪಂ ಸದಸ್ಯ ಅಮರೇಶ ಗೋನಾಳ್, ತಾಪಂ ಅಧ್ಯಕ್ಷ ಮಹ್ಮದ್ ರಫೀ, ಆರ್.ಕವಿತಾ, ಜೆಸ್ಕಾ ಇಇ ಎಚ್.ಎಂ.ನಟರಾಜ್, ಜಲಸಂಪನ್ಮೂಲ ಇಲಾಖೆ ಎಸ್‌ಇ ಎಚ್.ಆರ್.ರಾಠೋಡ, ಇಇ ರಮೇಶ ವಲ್ಯಾಪುರೆ ಇದ್ದರು.