ರಾಜ್ಯದಲ್ಲಿನ ಎಲ್ಲ ರಸ್ತೆಗಳ ಅವ್ಯವಸ್ಥೆ ಖಂಡಿಸಿ ಬಿಜೆಪಿ ವಿವಿಧ ಮೋರ್ಚಾದಿಂದ ಗಂಗಾವತಿ ಸಿಬಿಎಸ್ ವೃತ್ತದಲ್ಲಿ ವಾಹನ ಸಂಚಾರ ತಡೆ ದು ಬುಧವಾರ ಪ್ರತಿಭಟನೆ ನಡೆಸಲಾಯಿತು. ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಂಸದ ಎಸ್.ಶಿವರಾಮನಗೌಡ, ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ ಇತರರಿದ್ದರು.  
ಜಿಲ್ಲೆ

ಅನುದಾನ ಹಂಚಿಕೆಯಲ್ಲಿ ತಾರತಮ್ಯ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಟೀಕೆ

ಕುರುವತ್ತಿ ಶ್ರೀಕಾಂತಪ್ಪ

ಗಾವತಿ: ರಾಜ್ಯದಲ್ಲಿನ ಎಲ್ಲ ರಸ್ತೆಗಳ ಅವ್ಯವಸ್ಥೆ ಖಂಡಿಸಿ ಬಿಜೆಪಿ ವಿವಿಧ ಮೋರ್ಚಾದಿಂದ ನಗರದ ಸಿಬಿಎಸ್ ವೃತ್ತದಲ್ಲಿ ವಾಹನ ಸಂಚಾರ ತಡೆ ಪ್ರತಿಭಟನೆ ಬುಧವಾರ ನಡೆಯಿತು. ಇದರಿಂದ ಅರ್ಧಗಂಟೆಗೂ ಹೆಚ್ಚು ಕಾಲ ಸಂಚಾರಸಿಕ್ಕು ಉಂಟಾಯಿತು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಗ್ಯಾರಂಟಿ ಯೋಜನೆ ನೆಪದಲ್ಲಿ ರಾಜ್ಯ ಸರ್ಕಾರ ಅಭಿವೃದ್ಧಿ ಮರೆತಿದ್ದು, ಅಧಿಕಾರಕ್ಕೆ ಬಂದು ಮೂರು ವರ್ಷ ಸನಿಹಕ್ಕೆ ಬಂದರೂ ರಸ್ತೆಗಳಲ್ಲಿನ ಗುಂಡಿ ಮುಚ್ಚಲಾಗುತ್ತಿಲ್ಲ. ಸಿಎಂ ಮತ್ತು ಡಿಸಿಎಂ ವಿತಂಡ ನೀತಿಗಳಿಂದ ಭ್ರಷ್ಟಾಚಾರ ಹೆಚ್ಚುತ್ತಿದ್ದು, ಅನುದಾನ ವಿತರಣೆಯಲ್ಲೂ ತಾರತಮ್ಯ ನೀತಿ ಅನುಸರಿಸಿದ್ದಾರೆ. ರೈತರ ಜೀವನಾಡಿ ತುಂಗಭದ್ರಾ ಜಲಾಶಯದ ಗೇಟ್ ಬದಲಾವಣೆ ವಿಚಾರದಲ್ಲೂ ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ ಎಂದರು.

ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ ಮಾತನಾಡಿ, ಅನ್ನ ಭಾಗ್ಯ ಯೋಜನೆ ಕಳ್ಳರ ಪಾಲಾಗುತ್ತಿದ್ದು, ಅಕ್ಕಿ ಕಳ್ಳರನ್ನು ಸರ್ಕಾರವೇ ರಕ್ಷಿಸುತ್ತಿದೆ. ಬಡವರಿಗೆ ಸೇರಬೇಕಾದ ಪಡಿತರ ಪ್ರಭಾವಿಗಳ ಮೂಲಕ ವಿದೇಶಕ್ಕೆ ರವಾನೆಯಾಗುತ್ತಿದೆ ಎಂದು ದೂರಿದರು.

ಮಾಜಿ ಸಂಸದ ಎಸ್.ಶಿವರಾಮನಗೌಡ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ ಮಾತನಾಡಿದರು. ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ಗಿರೇಗೌಡ, ನಗರಸಭೆ ಅಧ್ಯಕ್ಷೆ ಹೀರಾಬಾಯಿಸಿಂಗ್, ಸದಸ್ಯರಾದ ಪರಶುರಾಂಮಡ್ಡೇರ್, ನವೀನ್ ಮಾ.ಪಾಟೀಲ್, ಮೌಲಸಾಬ್, ಬಿಜೆಪಿ ನಗರ ಘಟಕ ಅಧ್ಯಕ್ಷ ಚಂದ್ರು ಹೀರೂರ್, ಗ್ರಾಮೀಣ ಮಂಡಲ ಅಧ್ಯಕ್ಷ ಡಿ.ಕೆ. ಆಗೋಲಿ, ಮುಖಂಡರಾದ ಜಿ.ಶ್ರೀಧರ್, ಮನೋಹರಗೌಡ ಹೇರೂರು, ಯಮನೂರ ಚೌಡ್ಕಿ, ರಾಚಪ್ಪ ಸಿದ್ದಾಪುರ, ಚಂದ್ರು ಅಕ್ಕಿ, ಶಿವಪ್ಪ ಮಾದಿಗ, ಶ್ರೀನಿವಾಸ ಧೂಳಾ, ರೇಖಾ ರಾಯಬಾಗಿ, ರಾಧಾ ಉಮೇಶ, ಲಲಿತಾ, ದುರುಗಪ್ಪ ದಳಪತಿ, ಕರವೇ ಜಿಲ್ಲಾಧ್ಯಕ್ಷ ಪಂಪಣ್ಣನಾಯಕ ಇತರರಿದ್ದರು.