ಗಂಗಾವತಿ: ಜ್ಞಾನ ದಾನದ ಮೂಲಕ ಭವಿಷ್ಯದ ಪ್ರಜೆಗಳನ್ನು ರೂಪಿಸುತ್ತಿರುವ ಶಿಕ್ಷಣ ಸಂಸ್ಥೆಗಳ ಕಾರ್ಯಕ್ರಮ ಪ್ರಮುಖವಾಗಿದ್ದು, ಸಾಧನೆ ಮೂಲಕ ಸಂಸ್ಥೆ ಹೆಸರು ಉಳಿಸಬೇಕು ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಚ್. ರವೀಂದ್ರನಾಥ ಹೇಳಿದರು.
ನಗರದ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಲಿಂ.ಶ್ರೀ ಚನ್ನಬಸವ ಸ್ವಾಮಿ ಸ್ಮರಣೆ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದರು. ವೀರಶೈವ ಮಠಗಳು ಅಕ್ಷರ ಮತ್ತು ಅನ್ನ ದಾಸೋಹ ಮೂಲಕ ಸರ್ವ ಸಮಾಜದ ಒಳಿತು ಬಯಸುತ್ತಿವೆ. ತಂದೆ-ತಾಯಿ ಮತ್ತು ಗುರುಗಳಿಗೆ ಗೌರವ ನೀಡುವ ಮೂಲಕ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಬೇಕಿದೆ. ನಿರಂತರ ಅಧ್ಯಯನ ಮಾಡುತ್ತಾ ಸಾಧನೆಗಾಗಿ ಸಮಯ ಮೀಸಲಿಡಬೇಕು ಎಂದರು.
ಕಮತಗಿ ಹುಚ್ಚೇಶ್ವರ ಸಂಸ್ಥಾನ ಮಠದ ಹುಚ್ಚೇಶ್ವರ ಸ್ವಾಮೀಜಿ ಮಾತನಾಡಿ, ಶಿಕ್ಷಣ ಕ್ರಾಂತಿಯಲ್ಲಿ ವೀರಶೈವ ಮಠಗಳ ಕೊಡುಗೆ ಅಪಾರವಿದೆ. ಕೆಜಿಯಿಂದ ಪಿಜಿವರೆಗೂ ಸಂಸ್ಥೆಗಳನ್ನು ಆರಂಭಿಸಿರುವ ಕಲ್ಮಠವೇ ಸಾಕ್ಷಿ. ಎಲ್ಲ ದಾನಗಳಲ್ಲಿ ವಿದ್ಯಾದಾನ ಶ್ರೇಷ್ಠವಾಗಿದ್ದು, ಜ್ಞಾನವೊಂದಿದ್ದರೆ ಎಲ್ಲ ದಾನಗಳನ್ನು ಮಾಡಲು ಸಾಧ್ಯವಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಸಂಘದ ಅಧ್ಯಕ್ಷ ಕಲ್ಮಠದ ಡಾ.ಕೊಟ್ಟೂರು ಸ್ವಾಮೀಜಿ ಮಾತನಾಡಿದರು. ವಿವಿಧ ಕ್ಷೇತ್ರದ ಸಾಧಕರಾದ ಡಾ.ಜಿ. ಚಂದ್ರಪ್ಪ, ಡಾ.ವಿ.ವಿ. ಚಿನಿವಾಲರ್, ದೊಡ್ಡಪ್ಪ ದೇಸಾಯಿ, ಎಸ್.ಶಿವರಾಮನಗೌಡ, ಎಚ್.ಎಂ. ಮಂಜುನಾಥ, ಡಾ.ಶರಣಬಸಪ್ಪ ಕೋಲ್ಕಾರ್ ಅವರನ್ನು ಸನ್ಮಾನಿಸಲಾಯಿತು.
ಆಂಗ್ಲ ಮಾಧ್ಯಮ ಶಾಲೆಗೆ ಕನಕಗಿರಿ ಕಲ್ಲಬಾಗಿಲಮಠದ ವೀರಬಸಮ್ಮ ಬಸಲಿಂಗಯ್ಯಸ್ವಾಮಿ ಎಂದು
ನಾಮಕರಣ ಮಾಡಲಾಯಿತು. ಹಾನಗಲ್ಲ ಶ್ರೀಗುರು ಕುಮಾರೇಶ್ವರ ಸಹಕಾರಿ ಸಂಘದ ಹೊಸ ಕಟ್ಟಡ ಉದ್ಘಾಟಿಸಲಾಯಿತು. ಅಂಬೇಡ್ಕರ್ ಮಹಾ ಪರಿನಿರ್ವಾಣ ನಿಮಿತ್ತ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ನಮನ ಸಲ್ಲಿಸಲಾಯಿತು.
ಮಾಜಿ ಶಾಸಕ ಪರಣ್ಣ ಮುನವಳ್ಳಿ, ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ. ತಿಪ್ಪೇರುದ್ರಸ್ವಾಮಿ, ಟಿಎಪಿಸಿಎಂಎಸ್ ಸದಸ್ಯ ಜೋಗದ ನಾರಾಯಣಪ್ಪ ನಾಯಕ, ನಗರಸಭೆ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪ ನಾಯಕ, ಆಡಳಿತ ಮಂಡಳಿ ಉಪಾಧ್ಯಕ್ಷ ಕೆ. ಚನ್ನಬಸಯ್ಯಸ್ವಾಮಿ, ಕಾರ್ಯದರ್ಶಿ ಶರಣೇಗೌಡ ಮಾ.ಪಾಟೀಲ್, ಸದಸ್ಯರಾದ ಗುಂಜಳ್ಳಿ ರಾಜಶೇಖರಪ್ಪ, ಸಿಂಗನಾಳ ಸುರೇಶ, ಕಳಕನಗೌಡ, ದುರುಗಪ್ಪ ನಾಯಕ, ಕಮತಗಿ ಲಿಂಗಪ್ಪ ಹೀರಾಳ್, ಅಶೋಕಸ್ವಾಮಿ ಹೇರೂರು, ಪ್ರಾಚಾರ್ಯ ಪ್ರೊ. ಬಸವರಾಜ ಅಯೋಧ್ಯಾ ಇತರರಿದ್ದರು.