ಗಂಗಾವತಿ: ಆರೋಗ್ಯ ರಕ್ಷಣೆ ಜತೆಗೆ ಪರಿಸರ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಶಾಸಕ ಪರಣ್ಣಮುನವಳ್ಳಿ ಹೇಳಿದರು. ನಗರದ 13ನೇ ವಾರ್ಡ್ ಶರಣಬಸವೇಶ್ವರ ಕ್ಯಾಂಪ್‌ನಲ್ಲಿ ಬಿಜೆಪಿ ಎಸ್‌ಟಿ ಮೋರ್ಚಾದಿಂದ ಸೇವಾ ಸಪ್ತಾಹ ನಿಮಿತ್ತ ಮಂಗಳವಾರ ಆಯೋಜಿಸಿದ್ದ ಸ್ವಚ್ಛತಾಭಿಯಾನ ಮತ್ತು ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಆರೋಗ್ಯ ಸರಿಯಾಗಿದ್ದರೆ ಏನನ್ನಾದರೂ ಸಾಧನೆ ಮಾಡಲು ಸಾಧ್ಯ. ಸುತ್ತ್ತಲಿನ ಪರಿಸರ ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದ್ದು, ಗಿಡಗಳನ್ನು ಬೆಳೆಸಲು ಇತರರಿಗೆ ಪ್ರೇರಣೆಯಾಗುವಂತೆ ಸಲಹೆ ನೀಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಎಂ.ತಿಪ್ಪೇರುದ್ರಸ್ವಾಮಿ ಮಾತನಾಡಿ, ಕರೊನಾ ಮುಂಜಾಗ್ರತೆ ಕ್ರಮಗಳನ್ನು ಕಡ್ಡಾಯ ಪಾಲಿಸುವಂತೆ ಸಲಹೆ ನೀಡಿದರು. ಸುತ್ತಲಿನ ಪರಿಸರ ಸ್ವಚ್ಛತೆಗೊಳಿಸಿದ ಬಳಿಕ ಸಸಿಗಳನ್ನು ನೆಟ್ಟರು. ಎಸ್ಟಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ನಾಯಕ ಹೊಸ್ಮಲಿ, ನಗರ ಮಂಡಲ ಅಧ್ಯಕ್ಷ ಕಾಶೀನಾಥ ಚಿತ್ರಗಾರ, ಮುಖಂಡರಾದ ಯಂಕಪ್ಪ ಕಟ್ಟಿಮನಿ, ವೀರೇಶ ಬಲ್ಕುಂದಿ, ವಿವಿಧ ಮೋರ್ಚಾ ಪದಾಧಿಕಾರಿಗಳಾದ ರಮೇಶ ಹತ್ತಿಮರ, ಮಂಜುನಾಥ ಕೋಲ್ಕಾರ್, ಸಂಗಯ್ಯಸ್ವಾಮಿ ಸಂಶಿಮಠ, ಶ್ರೀನಿವಾಸ ಧೂಳಾ ಇತರರಿದ್ದರು.