ಗಂಗಾವತಿ: ಚುನಾವಣೆ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಬೇಕಿದ್ದು, ಮತದಾರರಿಗೆ ಒಡ್ಡುವ ಆಮಿಷಗಳನ್ನು ನಿಯಂತ್ರಿಸುವಂತೆ ತಾಪಂ ಇಒ ಡಾ.ಮೋಹನ್ ಹೇಳಿದರು.
ನಗರದ ತಾಪಂ ಮಂಥನ ಸಭಾಂಗಣದಲ್ಲಿ ತಾಲೂಕಾಡಳಿತದಿಂದ ಸೋಮವಾರ ಆಯೋಜಿಸಿದ್ದ ಮತದಾನ ಕೇಂದ್ರಕ್ಕೆ ನಿಯೋಜನೆಗೊಂಡ ಸೆಕ್ಟರ್ ಅಧಿಕಾರಿಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಲು ಪೊಲೀಸ್ ಅಧಿಕಾರಿಗಳ ನೇತೃತ್ವದ ತಂಡವಿದ್ದು, ಸೆಕ್ಟರ್ ಅಧಿಕಾರಿಗಳು ಸಮನ್ವಯ ಸಾಧಿಸಬೇಕು.
ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಕಂಡು ಬಂದರೆ ಕೂಡಲೇ ಅಧಿಕಾರಿಗಳನ್ನು ಸಂಪರ್ಕಿಸಬೇಕಿದ್ದು, ಯಾವುದೇ ಕಾರಣಕ್ಕೂ ಕುಮ್ಮಕ್ಕು ನೀಡಬಾರದು. ಬಾಡೂಟಕ್ಕೆ ಬ್ರೇಕ್ ಹಾಕಬೇಕಿದ್ದು, ಮತದಾನ ಕೇಂದ್ರದ 200 ಮೀ. ವ್ಯಾಪ್ತಿಯಲ್ಲಿ ಯಾವುದೇ ಪಕ್ಷದ ಕಚೇರಿಗಳಿರದಂತೆ ನೋಡಿಕೊಳ್ಳಬೇಕು. ಜಾತ್ರೆ, ಸಂತೆಗೆ ನಿರ್ಬಂಧ ಹಾಕಿದ್ದು, ಅಂತಹ ಪ್ರಕರಣ ಕಂಡು ಬಂದರೆ ಕೂಡಲೇ ಜಾಗೃತಿ ಮೂಡಿಸಬೇಕು. ಮತದಾನ ಕೇಂದ್ರಕ್ಕೆ ನಿಯೋಜನೆಗೊಂಡ ಸಿಬ್ಬಂದಿಗೆ ಗುಣಮಟ್ಟದ ಆಹಾರ ಪೂರೈಸಬೇಕಿದ್ದು, ಗ್ರಾಪಂಗೆ ಜವಾಬ್ದಾರಿ ನೀಡಲಾಗಿದೆ. ಲಿತಾಂಶ ಬರುವವರೆಗೂ ನಿಯೋಜಿತ ಅಧಿಕಾರಿಗಳು ಅಲರ್ಟ್ ಆಗಿರಬೇಕಿದ್ದು, ಯಾವುದೇ ಕಾರಣಕ್ಕೂ ನೆಪಗಳನ್ನು ಹೇಳದಂತೆ ಸೂಚನೆ ನೀಡಿದರು.
ತಹಸೀಲ್ದಾರ್ ಎಂ.ರೇಣುಕಾ ಮಾತನಾಡಿ, ಸೆಕ್ಟರ್ ಅಧಿಕಾರಿ, ಪಿಡಿಒ, ಗ್ರಾಮಲೆಕ್ಕಿಗರ ತಂಡ ಮತದಾನ ಕೇಂದ್ರ ನಿಯಂತ್ರಿಸಬೇಕಿದ್ದು, ಲೋಪ ಕಂಡು ಬಂದರೆ ಚುನಾವಣೆ ಅಧಿಕಾರಿಗಳ ಗಮನಕ್ಕೆ ತರಬೇಕು. ಬ್ಯಾಲೆಟ್ ಪೇಪರ್ ಮುದ್ರಣವಾಗುತ್ತಿದ್ದು, ನಿಯೋಜನೆಗೊಂಡ ಸಿಬ್ಬಂದಿ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುವಂತೆ ಸಲಹೆ ನೀಡಿದರು.
ಚುನಾವಣೆ ಶಿರಸ್ತೇದಾರ ಜೆ.ಕೆ.ಅನಂತ, ಕಂದಾಯ ನಿರೀಕ್ಷಕರಾದ ಮಂಜುನಾಥ ಹಿರೇಮಠ, ಹನುಮಂತಪ್ಪ, ಪಿಡಿಒ ಬಸವರಾಜ, ಕೃಷ್ಣ, ಮಂಜುನಾಥ ಅಂಗಡಿ, ವತ್ಸಲಾ, ನೀಲಾ ಸೂರ್ಯಕುಮಾರಿ, ಗ್ರಾಮಲೆಕ್ಕಿಗರಾದ ಮಹಾಲಕ್ಷ್ಮಿ,ಮಂಜುನಾಥ, ಜ್ಯೋತಿ ಇತರರಿದ್ದರು.