ಗಂಗಾವತಿ: ತಾಲೂಕಿನ ಸಣಾಪುರದ ಜಲಾಶಯ ಬಳಿಯ ರಾಜೀವ್‌ಗಾಂಧಿ ಬಹುಗ್ರಾಮ ಯೋಜನೆ ಕುಡಿವ ನೀರು ಪೂರೈಕೆ ಘಟಕ ಸ್ಥಗಿತಗೊಂಡಿದ್ದು, ನೀರಿಗಾಗಿ ವಿವಿಧ ಗ್ರಾಮಸ್ಥರು ಪರದಾಡುವಂತಾಗಿದೆ.
ಆನೆಗೊಂದಿ, ಕಡೇಬಾಗಿಲು, ಚಿಕ್ಕರಾಂಪುರ, ಜಂಗ್ಲಿ ಸೇರಿ ಹಲವು ಗ್ರಾಮಗಳಿಗೆ ಕುಡಿವ ನೀರು ಪೂರೈಸಲು ಸಣಾಪುರ ಜಲಾಶಯ ಬಳಿ ಶುದ್ಧ ಕುಡಿವ ನೀರಿನ ಘಟಕ ನಿರ್ಮಿಸಿದ್ದು, ನಿರ್ವಹಣೆ ಕೊರತೆಯಿಂದ ಕಳೆದ ವಾರದಿಂದ ಸ್ಥಗಿತಗೊಂಡಿದೆ. ಘಟಕ ನಿರ್ವಹಣೆಯನ್ನು ಖಾಸಗಿ ವ್ಯಕ್ತಿಗಳಿಗೆ ಗುತ್ತಿಗೆ ನೀಡಿದ್ದು, ನಿರ್ಲಕ್ಷ್ಯದಿಂದ ಕುಡಿವ ನೀರಿನ ವ್ಯವಸ್ಥೆಯಾಗುತ್ತಿಲ್ಲ. ಪಂಪ್‌ಸೆಟ್ ದುರಸ್ತಿ ನೆಪದಲ್ಲಿ ಕಾಲಹರಣ ಮಾಡಿದ ಸಿಬ್ಬಂದಿ, ಪರ್ಯಾಯ ವ್ಯವಸ್ಥೆಗೆ ಮುಂದಾಗುತ್ತಿಲ್ಲ.
ಗುತ್ತಿಗೆ ಪಡೆದವರಿಗೆ ಸರ್ಕಾರ 19 ತಿಂಗಳಿಂದ ನಿರ್ವಹಣೆ ವೆಚ್ಚ ಪಾವತಿಸಿಲ್ಲ. ಹೀಗಾಗಿ ನಿರ್ವಹಣೆಯಲ್ಲಿ ಲೋಪವಾಗುತ್ತಿದೆ. ಅದರಂತೆ ಸಿಬ್ಬಂದಿಗೂ ಗೌರವಧನ ಸಿಕ್ಕಿಲ್ಲ. ಗುತ್ತಿಗೆದಾರ ಸಂಪರ್ಕಕ್ಕೆ ಸಿಗುತ್ತಿಲ್ಲ. ಇನ್ನೂ ಶುದ್ಧೀಕರಣ ಘಟಕದ ನಿರ್ವಹಣೆ ಸಮಸ್ಯೆ ಬಗ್ಗೆ ಜು.15ರಂದು ಜಿಪಂ ಸಿಇಒಗೆ ಪತ್ರ ಬರೆದರೂ ಇದುವರೆಗೆ ಸ್ಪಂದಿಸಿಲ್ಲ. ಬಹುತೇಕ ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗಿದ್ದು, ಪರ್ಯಾಯ ವ್ಯವಸ್ಥೆಯಾಗುತ್ತಿಲ್ಲ ಎಂದು ಆನೆಗೊಂದಿ ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ ಹೊನ್ನಪ್ಪ ನಾಯಕ ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳಕ್ಕೆ ಜಿಪಂ ಇಂಜಿನಿಯರಿಂಗ್ ವಿಭಾಗದ ಎಇಇ ದೇವಣ್ಣ ಕಟ್ಟಿ, ಎಇ ಸುಮನ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಗುತ್ತಿಗೆದಾರರಿಗೆ ಗೌರವಧನ ಕೊಡಿಸುವಂತೆ ನಿರ್ವಹಣೆಗೆ ಸಿಬ್ಬಂದಿ ತಾಕೀತು ಮಾಡಿದರು. ನಿರ್ವಹಣೆ ಗುತ್ತಿಗೆಯನ್ನು ಶಾಸಕ ಗಾಲಿ ಜನಾರ್ದನರೆಡ್ಡಿ ಬೆಂಬಲಿಗರು ಪಡೆದುಕೊಂಡಿದ್ದು, ಸರ್ಕಾರದಿಂದ ನಿರ್ವಹಣೆ ವೆಚ್ಚ ಬಾರದಿದ್ದಕ್ಕೆ ಸ್ಥಳಕ್ಕೂ ಭೇಟಿ ನೀಡುತ್ತಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.