ಗಂಗಾವತಿ ಶ್ರೀಕೃಷ್ಣ ಕಲಾಭವನದಲ್ಲಿ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸಮಾವೇಶದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರಾಜಣ್ಣ ಸೋಮವಾರ ಮಾತನಾಡಿದರು. ಗೌರವಾಧ್ಯಕ್ಷ ಯು.ಬಸವರಾಜ್, ಅಧ್ಯಕ್ಷೆ ಜಿ.ಹುಲಿಗೆಮ್ಮ ಇತರರಿದ್ದರು.  
ಜಿಲ್ಲೆ

ಸಮೀಕ್ಷೆಯಿಂದ ಯಾರೂ ಹೊರಗುಳಿಯದಿರಿ, ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ರಾಜಣ್ಣ ಹೇಳಿಕೆ

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ವಿಮುಕ್ತ ದೇವದಾಸಿಯರಿಗೆ ಮೂಲ ಸೌಕರ್ಯ ಒದಗಿಸಬೇಕಿದ್ದು, ಯೋಜನೆಗಳನ್ನು ಸಮರ್ಪಕ ಅನುಷ್ಠಾನಗೊಳಿಸುವಂತೆ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ರಾಜಣ್ಣ ಒತ್ತಾಯಿಸಿದರು.

ನಗರದ ಶ್ರೀಕೃಷ್ಣ ಕಲಾಭವನದಲ್ಲಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಜಿಲ್ಲಾ ಘಟಕದಿಂದ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸಮಾವೇಶದಲ್ಲಿ ಮಾತನಾಡಿದರು. ದೇವದಾಸಿ ಮಹಿಳೆಯರ ಮತ್ತು ಕುಟುಂಬ ಸದಸ್ಯರ ಮರು ಸಮೀಕ್ಷೆಗೆ ಸರ್ಕಾರ ಕ್ರಮ ಕೈಗೊಂಡಿದ್ದು, ಎಚ್ಚರಿಕೆಯಿಂದ ಮಾಹಿತಿ ಒದಗಿಸಬೇಕಿದೆ. ಸಮೀಕ್ಷೆ ಸಂದರ್ಭದಲ್ಲಿ ದೇವದಾಸಿ ಮಹಿಳೆ ಕುಟುಂಬದ ಯಾವೊಬ್ಬ ಸದಸ್ಯೆಯೂ ಹೊರಗುಳಿಯಬಾರದು. ಸಂಕಷ್ಟದಲ್ಲಿರುವ ದೇವದಾಸಿ ಕುಟುಂಬಕ್ಕೆ ನೆರವಾಗುವ ರೀತಿಯಲ್ಲಿ ಸಮೀಕ್ಷೆ ನಡೆಯಲಿ ಎಂದರು.

ಸಂಘದ ಗೌರವಾಧ್ಯಕ್ಷ ಯು.ಬಸವರಾಜ್ ಮಾತನಾಡಿ, ಮರು ಸಮೀಕ್ಷೆಯಲ್ಲಿ ತಾಂತ್ರಿಕ ತೊಡಕುಗಳಿದ್ದು, ಎಚ್ಚರಿಕೆಯಿಂದ ಪಾಲ್ಗೊಳ್ಳಬೇಕಿದೆ. ಸಮೀಕ್ಷೆಯಲ್ಲಿ ವಯಸ್ಸಿನ ಮಿತಿ ಅಳವಡಿಸಬಾರದು ಮತ್ತು ಕುಟುಂಬದ ಮೃತ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳಬೇಕು. ಆನ್‌ಲೈನ್ ಕೈಬಿಟ್ಟು ಅಂಗನವಾಡಿ ಮೂಲಕವೇ ಸಮೀಕ್ಷೆ ನಡೆಸಿದರೆ ದೇವದಾಸಿ ಕುಟುಂಬಕ್ಕೆ ನ್ಯಾಯ ದೊರೆಯಲಿದೆ ಎಂದರು.

ಕೈಗೊಂಡ ನಿರ್ಧಾರಗಳು: ದೇವದಾಸಿ ಕುಟುಂಬಕ್ಕೆ ಪುನರ್ವಸತಿ ಕಲ್ಪಿಸುವುದು, ಜೀವನೋಪಾಯಕ್ಕೆ ಭೂಮಿ ಮಂಜೂರು, ವಿದ್ಯಾವಂತ ಮಕ್ಕಳಿಗೆ ಉದ್ಯೋಗ ಇಲ್ಲವೇ ನಿರುದ್ಯೋಗ ಭತ್ಯೆ ಒದಗಿಸುವುದು, ನರೇಗಾ ಯೋಜನೆಯಡಿ 150 ದಿನ ಕಡ್ಡಾಯಗೊಳಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಡಲು ಸಮಾವೇಶದಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.

ಸಂಘದ ರಾಜ್ಯಾಧ್ಯಕ್ಷೆ ಜಿ.ಹುಲಿಗೆಮ್ಮ, ಜಿಲ್ಲಾ ಘಟಕದ ಪದಾಧಿಕಾರಿಗಳಾದ ಮಂಜುನಾಥ ಡಗ್ಗಿ, ಕೆ.ಹುಸೆನಪ್ಪ, ಸುಂಕಪ್ಪ ಗದಗ, ಭಾಗಮ್ಮ, ಅಯ್ಯಮ್ಮ, ರಾಜಮ್ಮ, ಗಂಗಮ್ಮ, ಮಲ್ಲಮ್ಮ ಇತರರಿದ್ದರು.