ಗಂಗಾವತಿ : ಧರ್ಮದ ಹೆಸರಿನಲ್ಲಿ ವಿಭಜನೆ ತಂತ್ರ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಂಘಟಿತ ಹೋರಾಟದ ಅಗತ್ಯವಿದ್ದು, ಪ್ರಜಾಸತ್ತಾತ್ಮಕ ಚಳವಳಿ ಸೃಷ್ಟಿಸಬೇಕಿದೆ ಎಂದು ಕೇರಳದ ಮಾಜಿ ಸಚಿವ ಹಾಗೂ ಸಿಪಿಐ(ಎಂ) ಪಕ್ಷ ಪಾಲಿಟ್ ಬ್ಯೂರೋ ಸದಸ್ಯ ಎಂ.ಎ.ಬೇಬಿ ಹೇಳಿದರು.
ನಗರದ ಬಾಬು ಜಗಜೀವನರಾಂ ವೃತ್ತದಲ್ಲಿ ಸಿಪಿಐ(ಎಂ) ಜಿಲ್ಲಾ ಸಮಿತಿಯಿಂದ ಹಮ್ಮಿಕೊಂಡ 6ನೇ ಜಿಲ್ಲಾ ಸಮ್ಮೇಳನದ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದರು.
ಕೇಂದ್ರದ ಯೋಜನೆಗಳು ಸಾಮಾನ್ಯ ಜನರ ಬದುಕನ್ನು ದುಸ್ತರ ಮಾಡಿದೆ. ಜನಹಿತ ಬದಲು ಧರ್ಮದ ಹೆಸರಿನಲ್ಲಿ ವಿಭಜನೆ ತಂತ್ರಗಳನ್ನು ಕೈಗೊಳ್ಳಲಾಗುತ್ತಿದೆ. ವಿಮುಕ್ತ ದೇವದಾಸಿ, ಅಂಗನವಾಡಿ, ಬಿಸಿಯೂಟ ನೌಕರರ ಹೋರಾಟಕ್ಕೂ ಸರ್ಕಾರ ಬೆಲೆ ನೀಡುತ್ತಿಲ್ಲ. ಪಕ್ಷದ ಹೋರಾಟದ ಲದಿಂದ ತಾಲೂಕಿನ ಮರಕುಂಬಿ ಪ್ರಕರಣದಲ್ಲಿ ದಲಿತರಿಗೆ ಸೂಕ್ತ ನ್ಯಾಯ ಸಿಕ್ಕಿದೆ. ನ್ಯಾಯಕ್ಕಾಗಿ ಪ್ರಶ್ನಿಸಿದರೆ ದೌರ್ಜನ್ಯ ನಡೆಸುವಂತ ವ್ಯವಸ್ಥೆ ರಾಜ್ಯದಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.
ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯೆ ಎಸ್.ವರಲಕ್ಷ್ಮಿ ಮಾತಾನಾಡಿ, ಅಸಂಘಟಿತ ಕಾರ್ಮಿಕ ವೇತನ ಹೆಚ್ಚಳಕ್ಕಾಗಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಪರಿಹಾರ ಸಿಕ್ಕಿಲ್ಲ. ಸಂವಿಧಾನ ಬದಲಾವಣೆ ಮಾತುಗಳೇ ಕೇಳಿಬರುತ್ತಿವೆ ಹೊರತು ಸಂವಿಧಾನಾತ್ಮಕ ಹಕ್ಕುಗಳನ್ನು ನೀಡುವಲ್ಲಿ ಎಲ್ಲ ಸರ್ಕಾರಗಳು ವಿಲವಾಗಿವೆ ಎಂದರು. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸುವಲ್ಲಿ ಸರ್ಕಾರ ಆಸಕ್ತಿವಹಿಸುತ್ತಿಲ್ಲ. ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಗೆ ಗಮನಹರಿಸುವಂತೆ ಒತ್ತಾಯಿಸಿದರು.
ರಾಜ್ಯಮಂಡಳಿ ಸದಸ್ಯ ಜಿ.ನಾಗರಾಜ ಮಾತನಾಡಿ, ಸುಳ್ಳು ಹೇಳಿ ಕ್ಷೇತ್ರದಲ್ಲಿ ಅಧಿಕಾರಕ್ಕೆ ಬಂದ ಶಾಸಕ ಗಾಲಿ ಜನಾರ್ದನರೆಡ್ಡಿ ನಾಪತ್ತೆಯಾಗಿದ್ದು, ಜನರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಉದ್ಯೋಗ ಸೃಷ್ಟಿ, ಮನೆ ನೀಡುವ ಭರವಸೆ ಹುಸಿಯಾಗಿದೆ ಎಂದು ಹೇಳಿದರು.
ರಾಜ್ಯ ಸಮಿತಿ ಕಾರ್ಯದರ್ಶಿ ಯು.ಬಸವರಾಜ, ಸದಸ್ಯ ಚಂದ್ರಪ್ಪ ಹೊಸ್ಕೇರಾ, ಜಿಲ್ಲಾ ಕಾರ್ಯದರ್ಶಿ ನಿರುಪಾದಿ ಬೆಣಕಲ್, ವಿವಿಧ ಸಂಘಟನೆ ಪದಾಧಿಕಾರಿಗಳಾದ ಕೆ.ಹುಸೇನಪ್ಪ, ಲಕ್ಷ್ಮಿದೇವಿಸೋನಾರ್, ಕಲಾವತಿ, ಸಂಗಮ್ಮ ಕುಷ್ಟಗಿ, ಖಾಸೀಂ ಸರ್ದಾರ್, ಎಂ. ಬಸವರಾಜ, ಬಾಳಪ್ಪ ಹುಲಿಹೈದರ, ಅಮರೇಶ ಕಡಗದ್ ಇತರರಿದ್ದರು. ಸದಸ್ಯ ಮಂಜುನಾಥ ಡಗ್ಗಿ ನಿರ್ವಹಿಸಿದರು.
ಬಹಿರಂಗ ಸಭೆಗೂ ಮುನ್ನ ಸಿಪಿಐ(ಎಂ)ಮತ್ತು ಅಂಗ ಪಕ್ಷದ ಸದಸ್ಯರು ನಗರದ ಸಿಬಿಎಸ್ ವೃತ್ತದಿಂದ ಬಾಬು ಜಗಜೀವನರಾಂ ವೃತ್ತದವರೆಗೂ ಬೃಹತ್ ಮೆರವಣಿಗೆ ನಡೆಸಿದರು. ಕೆಂಪು ಡ್ರೆಸ್ ಕೋಡ್ ಮತ್ತು ಧ್ವಜಗಳೊಂದಿಗೆ ಮೆರವಣಿಗೆಯಲ್ಲಿ ವಾದ್ಯ ಮೇಳಗಳು ಭಾಗವಹಿಸಿದ್ದವು. ನಗರದ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಸಮ್ಮೇಳನ ಜರುಗಿದ್ದು, ಮೊದಲನೇ ದಿನದಂದು ಕಾರ್ಮಿಕ ಮತ್ತು ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ನ.31ರಂದು ಸಮಾರೋಪ ಹಮ್ಮಿಕೊಳ್ಳಲಾಗಿದ್ದು, ಸಮ್ಮೇಳನದ ನಿರ್ಣಯಗಳನ್ನು ಅಂಗೀಕರಿಸಲಾಗುವುದು ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ನಿರುಪಾದಿ ಬೆಣಕಲ್ ತಿಳಿಸಿದರು.