ಜಿಲ್ಲೆ

ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಸಂಚಾರ ಬಂದ್

ಗಂಗಾವತಿ: ನಗರದ ಬಸ್ ಡಿಪೋ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಸ್ಥಳೀಯರು ಸಂಚಾರ ಸ್ಥಗಿತಗೊಳಿಸಿ ಭಾನುವಾರ ಪ್ರತಿಭಟನೆ ನಡೆಸಿದರು.

ನಗರಸಭೆ ಸದಸ್ಯ ಎಫ್.ರಾಘವೇಂದ್ರ ಮಾತನಾಡಿ, ಡಿಪೋ ಸಂಪರ್ಕ ರಸ್ತೆಯನ್ನು ಕುಡಿವ ನೀರು ಮತ್ತು ಒಳಚರಂಡಿ ಕಾಮಗಾರಿಗಾಗಿ ಎಲ್ಲೆಂದರಲ್ಲಿ ಅಗೆಯಲಾಗಿದೆ. ರಸ್ತೆ ಮರು ನಿರ್ಮಾಣ ಮಾಡುವಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ಲಕ್ಷ್ಯ ವಹಿಸಿದೆ.

ರಸ್ತೆ ನಿರ್ಮಾಣಕ್ಕಾಗಿ 21.75 ಲಕ್ಷ ರೂ. ಪ್ರಸ್ತಾವನೆಗೆ ಅನುಮೋದನೆ ದೊರೆತಿದ್ದರೂ, ಕಾಮಗಾರಿ ಆರಂಭಿಸಲು ಇಲಾಖೆ ವಿಳಂಬ ಧೋರಣೆ ಅನುಸರಿಸುತ್ತಿದೆ. ಹದಗೆಟ್ಟ ರಸ್ತೆಯಲ್ಲಿ ಬಸ್‌ಗಳು ಸಂಚರಿಸುತ್ತಿದ್ದು, ಅಪಘಾತ ಸಂಭವಿಸುತ್ತಿವೆ. ಒಳಚರಂಡಿ ಮಂಡಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು. ಸ್ಥಳೀಯರಾದ ಬಿ.ಆರ್.ದೇಸಾಯಿ, ರಾಮು ಯಾದವ್, ಚಿದಾನಂದ ಬಜಾರ್, ತಿಮ್ಮಣ್ಣ ದಂಡಿನ್, ಜಂಬುನಾಥ ಐಲಿ, ವಾದಿರಾಜ್ ಶ್ರೇಷ್ಠಿ, ಶಿವರಾಜ ಶೆಡ್ಡಿ, ಮಲ್ಲಿಕಾರ್ಜುನ ತಟ್ಟಿ, ರಾಮು ತಟ್ಟಿ, ಬಸವರಾಜ ಶಿರವಾರ ಇತರರಿದ್ದರು.