ಗಂಗಾವತಿ: ರಾಜ್ಯದಲ್ಲಿ ಅರಾಜಕತೆ ಹೆಚ್ಚುತ್ತಿದ್ದು, ಅಭಿವೃದ್ಧಿ ಬದಲು ಅಧಿಕಾರಕ್ಕಾಗಿ ಕಿತ್ತಾಡುವ ಸ್ಥಿತಿ ರಾಜ್ಯದ ಕಾಂಗ್ರೆಸ್‌ಗೆ ಬಂದಿದೆ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.
ತಾಲೂಕಿನ ಮರಳಿಯಲ್ಲಿ ಭಾನುವಾರ ಬಿಜೆಪಿ ವಿಭಾಗ ಮಟ್ಟದ ಸಂಘಟನಾತ್ಮಕ ಸಭೆಯಲ್ಲಿ ಮಾತನಾಡಿದರು. ಗ್ಯಾರಂಟಿಗಳಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಮರೆತಿದೆ. ಕ್ಷೇತ್ರದಲ್ಲಿ ಅಭಿವೃದ್ಧಿಯಾಗುತ್ತಿಲ್ಲ. ನನ್ನ ರಾಜಕೀಯ ಅನುಭವದಲ್ಲಿ ಇಂಥ ಸರ್ಕಾರ ನೋಡಿಲ್ಲ.
ಅನುದಾನಕ್ಕಾಗಿ ಒಂದೆಡೆ ಸಿಎಂಗೆ ಬಸವರಾಜ ರಾಯರಡ್ಡಿ ಬ್ಲಾಕ್ ಮೇಲ್ ಮಾಡುತ್ತಿದ್ದರೆ, ಮತ್ತೊಂದೆಡೆ ಸಚಿವ ಶಿವರಾಜ ತಂಗಡಗಿ ಕ್ಲಬ್, ಗಾಂಜಾ, ಮರಳು ದಂಧೆ ಮೂಲಕ ಹಣ ಮಾಡುತ್ತಿದ್ದಾರೆ. ಇಂಥ ಜಿಲ್ಲೇಲಿ ಕ್ಷೇತ್ರದ ಶಾಸಕ ಎನ್ನಲು ತಲೆತಗ್ಗಿಸುವಂಥ ಸ್ಥಿತಿ ಬಂದಿದೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಇದ್ದಂತೆ ರಾಜ್ಯದಲ್ಲಿ ವಿಜಯೇಂದ್ರ ಇದ್ದಾರೆ ಎಂದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ, ಮೋದಿ ವಿರುದ್ಧ ಒಂದೂ ಹಗರಣವಿಲ್ಲ. ಅನ್ಯ ದೇಶದವರು ಮೋದಿಗೆ ರತ್ನಗಂಬಳಿ ಹಾಕುತ್ತಾರೆ. ಆದರೆ, ಸಿಎಂ ಸಿದ್ದರಾಮಯ್ಯ ಸರ್ಕಾರ ಭ್ರಷ್ಟಚಾರದಲ್ಲಿ ಮುಳುಗಿದ್ದು, ಹಗರಣಗಳ ಸರಮಾಲೆಯನ್ನೇ ಕೊರಳಿಗೆ ಹಾಕಿಕೊಂಡಿದ್ದಾರೆ. ಕೆಲವರು ಜೈಲಿಗೂ ಹೋಗಿ ಬಂದಿದ್ದರೆ, ಕೆಲವರು ಬೇಲ್ ಮೇಲಿದ್ದಾರೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಸಹ ಉಸ್ತುವಾರಿ ಸುಧಾಕರರೆಡ್ಡಿ, ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಶಾಸಕರಾದ ಕೃಷ್ಣನಾಯ್ಕ, ಮಾನಪ್ಪವಜ್ಜಲ್, ಎಂಎಲ್ಸಿ ಹೇಮಲತಾ ನಾಯಕ, ಮಾಜಿ ಸಂಸದರಾದ ಎಸ್.ಶಿವರಾಮನಗೌಡ, ಕೆ.ವಿರೂಪಾಕ್ಷಪ್ಪ, ದೇವೇಂದ್ರಪ್ಪ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಕೆ.ಶರಣಪ್ಪ, ಜಿ.ವೀರಪ್ಪ, ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸುಗೂರು, ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಯ ಹಾಲಿ, ಮಾಜಿ ಜನಪ್ರತಿನಿಧಿಗಳು ಮತ್ತು ಪಕ್ಷದ ಪದಾಧಿಕಾರಿಗಳಿದ್ದರು.
ಜೂನಿಯರ್ ಪ್ರಹಸನ: ಪಕ್ಷ ಸಂಘಟನೆಯಲ್ಲಿ ಯಡಿಯೂರಪ್ಪ ಸೀನಿಯರ್ ಮತ್ತು ವಿಜಯೇಂದ್ರ ಜೂನಿಯರ್ ಎನ್ನುವ ಮೂಲಕ ಜನಾರ್ದನರೆಡ್ಡಿ ಅವರು ಜೂನಿಯರ್ ಚಿತ್ರದ ಪ್ರಚಾರ ಕೈಗೊಂಡರು. ಜೂನಿಯರ್ ಚಿತ್ರದ ಮೂಲಕ ಅನುಭವಿ ನಟರಿಗೆ ಸಮನಾಗಿ ಕಿರೀಟಿ ಅಭಿನಯಿಸುವ ಮೂಲಕ ಮೆಚ್ಚುಗೆ ಗಳಿಸಿದ್ದಾರೆ. ಅದರಂತೆ ವಿಜಯೇಂದ್ರ ಅವರು ಅವರ ತಂದೆಯಂತೆ ಸಂಘಟನೆಯಲ್ಲಿ ಅಪಾರ ಅನುಭವಗಳಿಸಿದ್ದಾರೆ. ಎಲ್ಲರ ವಿಶ್ವಾಸ ಗಳಿಸುವ ಮೂಲಕ ರಾಜ್ಯಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದರು.