ಗಂಗಾವತಿ ತಾಲೂಕು ಮರಳಿಯಲ್ಲಿ ಭಾನುವಾರ ಬಿಜೆಪಿ ವಿಭಾಗ ಮಟ್ಟದ ಸಂಘಟನಾತ್ಮಕ ಸಭೆಯಲ್ಲಿ ಮುಖಂಡರು ಒಗ್ಗಟ್ಟು ಪ್ರದರ್ಶಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಸಹ ಉಸ್ತುವಾರಿ ಸುಧಾಕರರೆಡ್ಡಿ, ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವ ಬಿ.ಶ್ರೀರಾಮುಲು, ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಶಾಸಕರಾದ ಗಾಲಿ ಜನಾರ್ದನರೆಡ್ಡಿ, ಕೃಷ್ಣನಾಯ್ಕ, ಮಾನಪ್ಪ ವಜ್ಜಲ್ ಇತರರಿದ್ದರು.  
ಜಿಲ್ಲೆ

ಭ್ರಷ್ಟಾಚಾರದಲ್ಲಿ ತೊಡಗಿದ ಕಾಂಗ್ರೆಸ್ ಸರ್ಕಾರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ

ಗಂಗಾವತಿ: ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮ, ಮುಡಾ ಹಗರಣ ಸೇರಿ ಹಲವು ನಿಗಮಗಳಲ್ಲಿ ಭ್ರಷ್ಟಾಚಾರವಾಗಿವೆ. ಖೊಟ್ಟಿ ಖಾತೆಗಳ ಮೂಲಕ ಕೋಟ್ಯಂತರ ರೂ. ದುರ್ಬಳಕೆ ಮಾಡಲಾಗಿದೆ. ಆ ಹಣವನ್ನು ಬೈ ಎಲೆಕ್ಷನ್‌ನಲ್ಲಿ ಬಳಸಲಾಗಿದೆ. ತನಿಖೆ ಹೆಸರಲ್ಲಿ ಆಯೋಗ ರಚಿಸಿ, ಅವರೇ ನಿಯೋಜಿಸುವ ಆಯೋಗದಿಂದ ಕ್ಲೀನ್ ಚಿಟ್ ಪಡೆಯುವುದು ಸಿಎಂಗೆ ಸಾಮಾನ್ಯವಾಗಿದೆ. ಕೊಪ್ಪಳ ಜಿಲ್ಲೆಯಲ್ಲೂ ಕೆಆರ್‌ಐಡಿಎಲ್ ಮೂಲಕ 72 ಕೋಟಿ ರೂ.ಗುಳಂ ಮಾಡಿರುವುದು ಗೊತ್ತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ತಾಲೂಕಿನ ಮರಳಿಯಲ್ಲಿ ಭಾನುವಾರ ಬಿಜೆಪಿ ವಿಭಾಗ ಮಟ್ಟದ ಸಂಘಟನಾತ್ಮಕ ಸಭೆ ಉದ್ಘಾಟಿಸಿ ಮಾತನಾಡಿದರು. ಮೈಸೂರಿನಲ್ಲಿ ನಡೆದಿದ್ದು ಸಿದ್ದರಾಮಯ್ಯ ಅವರ ವೈಭವೀಕರಣ ಸಮಾವೇಶ. ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದಾಗ 10 ಸಾವಿರ ಆಸನಗಳಲ್ಲಿ ಎಂಟು ಸಾವಿರ ಕುರ್ಚಿ ಖಾಲಿಯಿದ್ದವು. ಅಭಿವೃದ್ಧಿಗೆ ಒತ್ತು ನೀಡಿದ್ದರೆ ಬಲವಂತವಾಗಿ ಖಾಲಿಯಿರುವ ಕುರ್ಚಿಗಳಲ್ಲಿ ೆಟೋಗಳನ್ನು ಇಟ್ಟುಕೊಂಡು ಜೈಕಾರ ಹಾಕಿಸಿಕೊಳ್ಳುವ ಸ್ಥಿತಿ ಬರುತ್ತಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ದೂರದೃಷ್ಟಿ ಆಡಳಿತದಿಂದ ಭಾರತವು ನಾಲ್ಕನೇ ಅತಿ ದೊಡ್ಡ ದೇಶವಾಗಿದೆ. ಅಂಥ ಪ್ರಧಾನಿ ಬಗ್ಗೆ ಮೈಸೂರು ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಏಕವಚನದಲ್ಲಿ ಕರೆಯುವ ಮೂಲಕ ಅಸಹಾಯಕತೆ ಪ್ರದರ್ಶಿಸಿದ್ದಾರೆ. ಪ್ರಧಾನಿ ಬಗ್ಗೆ ಹೇಗೆ ಮಾತಾಡಬೇಕೆಂಬ ವಿವೇಚನೆಯನ್ನು ಖರ್ಗೆ ಕಳೆದುಕೊಂಡಿದ್ದಾರೆ ಎಂದರು.

ಶೀಘ್ರದಲ್ಲೇ ಆಗುತ್ತೆ ಕ್ರಾಂತಿ: ಕಾಂಗ್ರೆಸ್‌ನಲ್ಲಿ ನವೆಂಬರ್ ಅಥವಾ ಅದಕ್ಕೂ ಮೊದಲು ಕ್ರಾಂತಿಯಾಗುವ ಬಗ್ಗೆ ಸಿದ್ದರಾಮಯ್ಯ ಸುಳಿವು ನೀಡಿದ್ದು, ಮೈಸೂರು ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಮೇಲೆ ಅಸಮಾಧಾನ ಹೊರಹಾಕಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು. ಸಿಎಂ ಬದಲಾವಣೆ ಬಗ್ಗೆ ಒಳಗೊಳಗೆ ಸಮಾಲೋಚನೆಗಳು ನಡೆಯುತ್ತಿವೆ. ಆಡಳಿತ ಪಕ್ಷದಲ್ಲಿ ಕುದುವೆ ವ್ಯಾಪಾರ ಜೋರಾಗಿದೆ. 50 ಕೋಟಿ ರೂ.ೋಷಣೆಯಾಗಿದೆಯೇ ಹೊರತು, ಅಧಿಕೃತ ಆದೇಶವಿಲ್ಲ. ವಿಪಕ್ಷ ಶಾಸಕರಿಗೆ ಅನುದಾನ ನೀಡುವ ಬಗ್ಗೆ ಸ್ಪಷ್ಟತೆಯಿಲ್ಲ. ಜನಾರ್ದನರೆಡ್ಡಿ ಮತ್ತು ಶ್ರೀರಾಮುಲು ಬಿಜೆಪಿಗೆ ದೊಡ್ಡ ಶಕ್ತಿಯಾಗಿದ್ದು, ಇಬ್ಬರು ಒಟ್ಟಾಗಿ ಹೋದಾಗ ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದೆ. ಪಕ್ಷದ ಸಂಘಟನೆಯಲ್ಲಿ ಇಬ್ಬರೂ ಒಟ್ಟಾಗಿದ್ದು ನನಗೆ ಸಹಕಾರ ನೀಡುತ್ತಿದ್ದಾರೆ ಎಂದರು.

ರಾಜ್ಯಾಧ್ಯಕ್ಷ ಸ್ಥಾನ ವರಿಷ್ಠರ ತೀರ್ಮಾನ: ಲಿಂಗಸುಗೂರು (ರಾಯಚೂರು): ಮುಂದಿನ ದಿನಗಳಲ್ಲಿ ರಾಜ್ಯಾಧ್ಯಕ್ಷ ಯಾರಾಗಬೇಕೆಂಬುದನ್ನು ವರಿಷ್ಠರು ತೀರ್ಮಾನಿಸುತ್ತಾರೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಪಕ್ಷ ಮುನ್ನಡೆಸಿದ್ದೇನೆ. ಮರು ಆಯ್ಕೆ ಬಗ್ಗೆ ಹೈಕಮಾಂಡ್ ಏನು ನಿರ್ಧಾರ ಮಾಡುತ್ತೋ ನೋಡೋಣ. ಪಂಚಮಸಾಲಿ ಗುರುಪೀಠದಲ್ಲಿ ಉಂಟಾಗಿರುವ ಸಮಸ್ಯೆಯನ್ನು ಮುರುಗೇಶ ನಿರಾಣಿ ಬಗೆಹರಿಸುತ್ತಾರೆ. ಸದ್ಯದಲ್ಲೇ ಸಮಸ್ಯೆ ಸುಖಾಂತ್ಯಕಾಣಲಿದೆ ಎಂದರು.