ಗಂಗಾವತಿ: ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಮೂಲಕ ಉಳಿಸುವಂತೆ ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ನಗರದ ಬಿಇಒ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.
ತಾಲೂಕು ಸಮಿತಿ ಸದಸ್ಯರೊಂದಿಗೆ ಪ್ರತಿಭಟಿಸಿದ ನಂತರ ಬೇಡಿಕೆ ಮನವಿಯನ್ನು ಬಿಇಒ ಎಚ್.ಬಿ.ನಟೇಶ ಅವರಿಗೆ ಸಲ್ಲಿಸಿದರು. ಸಮಿತಿ ಜಿಲ್ಲಾಧ್ಯಕ್ಷ ಬಸವರಾಜ ಮ್ಯಾಗಳಮನಿ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಉಳಿಸುವ ಜವಾಬ್ದಾರಿ ಶಿಕ್ಷಣ ಇಲಾಖೆ ಮತ್ತು ಶಿಕ್ಷಕರ ಮೇಲಿದ್ದು, ಮೂಲ ಸೌಕರ್ಯಕಲ್ಪಿಸಬೇಕು. ಬೋಧನೆ ಹೊರತುಪಡಿಸಿ ಶಿಕ್ಷಕರಿಗೆ ಅನ್ಯ ಕಾರ್ಯಕ್ಕೆ ನಿಯೋಜನೆ ಮಾಡುವುದನ್ನು ಕೈಬಿಡಬೇಕು.
ಮತದಾರರ ಪಟ್ಟಿ ಪರಿಷ್ಕರಣೆ, ಜಾತಿ ಗಣತಿ, ಆರ್ಥಿಕ ಸಮೀಕ್ಷೆ, ಬಿಸಿಯೂಟದ ನಿರ್ವಹಣೆ, ದಾಖಲಾತಿ, ವರ್ಗಾವಣೆ ಪತ್ರ, ಪುಸ್ತಕ, ಸಮವಸ್ತ್ರ, ಶೂ ವಿತರಣೆ, ಕಂಪ್ಯೂಟರ್ ದಾಖಲೀಕರಣ ಸೇರಿ ಇತರೆ ಕಾರ್ಯದಿಂದ ಶಿಕ್ಷಕರನ್ನು ಮುಕ್ತಿಗೊಳಿಸಬೇಕು.
ಬೋಧನೆಗೆ ಮಾತ್ರ ಅವಕಾಶ ನೀಡುವುದರಿಂದ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿದ್ದು, ಖಾಸಗಿ ಶಾಲೆಗಳೊಂದಿಗೆ ಪೈಪೋಟಿ ನಡೆಸಬಹುದಾಗಿದೆ. ಹೆಚ್ಚುವರಿ ಕೆಲಸಕ್ಕಾಗಿ ನಿರುದ್ಯೋಗಿಗಳನ್ನು ಗೌರವಧನ ಆಧಾರದಡಿ ನಿಯೋಜಿಸುವ ಮೂಲಕ ಸರ್ಕಾರಿ ಶಾಲೆ ಉಳಿಸುವಂತೆ ಒತ್ತಾಯಿಸಿದರು. ಪದಾಧಿಕಾರಿಗಳಾದ ಜಡಿಯಪ್ಪ ಹಂಚಿನಾಳ, ರಾಮಣ್ಣ ರುದ್ರಾಕ್ಷಿ, ಹಾಲಪ್ಪ, ಜಂಬಣ್ಣ ಇತರರಿದ್ದರು.