ಗಂಗಾವತಿ: ಮಳೆಗಾಲ ಹಿನ್ನೆಲೆಯಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಲಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿವೆ ಎಂದು ನಗರಸಭೆ ವಿಪಕ್ಷ ನಾಯಕ ಮನೋಹರಸ್ವಾಮಿ ಹಿರೇಮಠ ಹೇಳಿದರು.
ನಗರದ 6ನೇ ವಾರ್ಡ್ ಮಹೆಬೂಬ್‌ನಗರ ಸ.ಹಿ.ಪ್ರಾ.ಶಾಲೆಯಲ್ಲಿ ಇಸ್ಲಾಂಪುರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ನೀರು ನಿಲ್ಲದಂತೆ ಎಚ್ಚರಿಕೆವಹಿಸಬೇಕಿದ್ದು, ಕೊಳಚೆ ನೀರಿನಿಂದ ಸೊಳ್ಳೆಗಳು ಉತ್ಪತ್ತಿಯಾಗಲಿವೆ. ಇದರಿಂದ ಡೆಂೆ, ಚಿಕೂನ್‌ಗುನ್ಯಾ ಸೇರಿ ಇತರ ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡಿದಂತಾಗಲಿದೆ. ಆರೋಗ್ಯ ಕಾರ್ಯಕರ್ತರು ಪ್ರತಿ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಬೇಕಿದ್ದು, ಸಮೀಕ್ಷೆ ಕೈಗೊಳ್ಳಬೇಕು. ಅನಾರೋಗ್ಯ ಪ್ರಕರಣ ಕಂಡು ಬಂದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು.
ತಾಲೂಕು ಆರೋಗ್ಯಶಿಕ್ಷಣಾಧಿಕಾರಿ ಆಶಾಬೇಗಂ ಮಾತನಾಡಿ, ಸೊಳ್ಳೆಗಳಿಂದ ಹರಡುವ ರೋಗ ನಿಯಂತ್ರಣಕ್ಕೆ ಸ್ವಯಂ ರಕ್ಷಣೆ ಮುಖ್ಯವಾಗಿದ್ದು, ಸೊಳ್ಳೆ ಪರದೆ ಬಳಸಿಕೊಳ್ಳಿ. ನೀರು ಸಂಗ್ರಹ ಪಾತ್ರೆಗಳನ್ನು ಭದ್ರವಾಗಿ ಮುಚ್ಚಿ. ಸೊಳ್ಳೆ ಉತ್ಪತ್ತಿಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.
ಮುಖ್ಯಶಿಕ್ಷಕ ಮಲ್ಲೇಶಪ್ಪ ಅಡ್ಡೇದಾರ್, ಮಲೇರಿಯಾ ಲಿಂಕ್ ವರ್ಕರ್ ರಮೇಶ ಸಾಲ್ಮನಿ, ಆರೋಗ್ಯ ನಿರೀಕ್ಷಕ ಕೆ.ಹನುಮೇಶ ನಾಯಕ, ಆರೋಗ್ಯ ಸುರಕ್ಷಣಾಧಿಕಾರಿ, ಆಶಾಕಾರ್ಯಕರ್ತೆಯರು ಮತ್ತು ಶಿಕ್ಷಕಿಯರಿದ್ದರು.