ಗಂಗಾವತಿ: ಅತಿಥಿ ಉಪನ್ಯಾಸಕರ ನೇಮಕಕ್ಕೆ ಒತ್ತಾಯಿಸಿ ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಕಾಲೇಜು ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.
ಕಾಲೇಜಿನಲ್ಲಿ ಉಪನ್ಯಾಸಕರ ಹುದ್ದೆ ಖಾಲಿಯಿದ್ದು, ಬಹುತೇಕ ತರಗತಿಗಳು ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿವೆ. ಕಳೆದ ವಾರದಿಂದ ಅತಿಥಿ ಉಪನ್ಯಾಸಕರನ್ನು ನಿಯೋಜಿಸದಿದ್ದರಿಂದ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿ ಪ್ರಾಚಾರ್ಯೆ ಡಾ.ಮುಮ್ತಾಜ್ ಬೇಗಂಗೆ ಮನವಿ ಸಲ್ಲಿಸಿದರು.
ಸರ್ಕಾರಿ ಕಾಲೇಜಿನಲ್ಲಿ ಎಲ್ಲ ವರ್ಗದ ಬಡ ಮತ್ತು ಮಧ್ಯಮ ಕುಟುಂಬದ ವಿದ್ಯಾರ್ಥಿಗಳೇ ಓದುತ್ತಿದ್ದು, ಉಪನ್ಯಾಸಕರ ಕೊರತೆಯಿಂದ ಸಕಾಲಕ್ಕೆ ಪಠ್ಯಕ್ರಮ ಪೂರ್ಣಗೊಳಿಸಲಾಗುತ್ತಿಲ್ಲ. ತರಗತಿಗಳು ನಡೆಯದಿದ್ದರಿಂದ ಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಸರ್ಕಾರ ಉನ್ನತ ಶಿಕ್ಷಣ ನಿರ್ಲಕ್ಷಿಸುತ್ತಿದ್ದು, ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಅತಿಥಿ ಉಪನ್ಯಾಸಕರ ನೇಮಕ ಆಗುವರಿಗೆ ತರಗತಿಗಳನ್ನು ಬಹಿಷ್ಕರಿಸಲಾಗುವುದು ಎಂದು ವಿದ್ಯಾರ್ಥಿ ಪ್ರತಿನಿಧಿಗಳಾದ ಸಂಪ್ರೀತಾ, ಗೋವಿಂದರೆಡ್ಡಿ, ಶರಣಬಸವ, ಜ್ಯೋತಿ ಇತರರು ತಿಳಿಸಿದರು.