ಗಂಗಾವತಿಯಲ್ಲಿ ಸಿಪಿಐಎಂ ತಾಲೂಕು ಸಮಿತಿ ಸದಸ್ಯರ ಪ್ರತಿಭಟನೆ | ತಹಸೀಲ್ದಾರ್ ಎಲ್.ಡಿ.ಚಂದ್ರಕಾಂತಗೆ ಮನವಿ
ಗಂಗಾವತಿ: ಎಪಿಎಂಸಿ ಕಾಯ್ದೆ ತಿದ್ದುಪಡಿ ಕೈ ಬಿಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸಿಪಿಐ(ಎಂ) ತಾಲೂಕು ಸಮಿತಿ ಸದಸ್ಯರು ನಗರದ ಮಿನಿವಿಧಾನಸೌಧ ಮುಂಭಾಗ ಪ್ರತಿಭಟಿಸಿ ತಹಸೀಲ್ದಾರ್ ಎಲ್.ಡಿ.ಚಂದ್ರಕಾಂತಗೆ ಮನವಿ ಸಲ್ಲಿಸಿದರು.
ಪಕ್ಷದ ಕಾರ್ಯದರ್ಶಿ ನಿತ್ಯಾನಂದ ಸ್ವಾಮಿ ಮಾತನಾಡಿ, ಕರೊನಾ ಮುಂಜಾಗ್ರತೆ ಕ್ರಮಗಳ ಹಿನ್ನೆಲೆಯಲ್ಲಿ ಕಾರ್ಮಿಕರು ದುಡಿಮೆ ಕಳೆದುಕೊಂಡಿದ್ದು, ಕುಟುಂಬ ಸಂಕಷ್ಟಕ್ಕೊಳಗಾಗಿವೆ. ಕಾರ್ಮಿಕರ ಯೋಜನೆ ರೂಪಿಸಬೇಕಿದ್ದ ರಾಜ್ಯ ಸರ್ಕಾರ ಕಾರ್ಪೊರೇಟ್ ಮತ್ತು ಬಹುರಾಷ್ಟ್ರೀಯ ಕಂಪನಿ ಪರ ಕಾಯ್ದೆಗಳನ್ನು ರೂಪಿಸುತ್ತಿದೆ. ಕಾರ್ಪೊರೇಟ್ ಕಂಪನಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಸುಗ್ರಿವಾಜ್ಞೆ ಮೂಲಕ ಎಪಿಎಂಸಿ ಕಾಯ್ದೆ ತಿದ್ದುಪಡಿ ಕೈಬಿಡಬೇಕಿದ್ದು, ವಿದ್ಯುತ್ ಕ್ಷೇತ್ರದ ಖಾಸಗೀಕರಣಕ್ಕೆ ಅವಕಾಶ ನೀಡಬಾರದು. ನಿರುದ್ಯೋಗ ಭತ್ಯೆ 10ಸಾವಿರ ೋಷಿಸಬೇಕಿದ್ದು, ಲಾಕ್‌ಡೌನ್ ಸಂದರ್ಭದಲ್ಲಿ ಕಾರ್ಮಿಕರಿಗೆ ಮಾಸಿಕ 7500ರೂ. ಆರ್ಥಿಕ ನೆರವು ನೀಡಬೇಕು. ಕಾರ್ಮಿಕರ ಕೆಲಸದ ಅವಧಿ 12ಗಂಟೆ ವಿಸ್ತರಿಸುವ ಯೋಜನೆ ಕೈಬಿಡಬೇಕು. ಉದ್ಯೋಗ ಭದ್ರತೆ ಜತೆಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಘಟಕಗಳ ಕಾರ್ಮಿಕರ ಲಾಕ್‌ಡೌನ್ ಅವಧಿಯ ವೇತನ ಸರ್ಕಾರವೇ ಭರಿಸುವಂತೆ ಒತ್ತಾಯಿಸಿದರು. ತಾಲೂಕು ಸಮಿತಿ ಕಾರ್ಯದರ್ಶಿ ನಿರುಪಾದಿ ಬೆಣಕಲ್, ಪದಾಧಿಕಾರಿಗಳಾದ ಮಂಜುನಾಥ ಡಗ್ಗಿ, ಶಿವಣ್ಣ ಬೆಣಕಲ್, ಕೃಷ್ಣಪ್ಪನಾಯಕ, ಬಾಳಪ್ಪ ಹುಲಿಹೈದರ್ ಇತರರಿದ್ದರು.