ಜಿಲ್ಲೆ

ಮಹಾಶಿವರಾತ್ರಿ ಹಬ್ಬದ ಅಂಗವಾಗಿ ದೇವಸ್ಥಾನಗಳಿಗೆ ಗಂಗಾಜಲ ವಿತರಿಸಿದ ಅಪರ ಜಿಲ್ಲಾಧಿಕಾರಿ

ಮಂಡ್ಯ: ಮಹಾ ಶಿವರಾತ್ರಿ ಹಬ್ಬದ ಹಿನ್ನಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಜಿಲ್ಲೆಯ ಎಲ್ಲಾ ತಾಲೂಕಿ ಶಿವನ ದೇವಾಲಯಗಳಿಗೆ ಪವಿತ್ರ ಗಂಗಾಜಲ ವಿತರಣೆ ಮಾಡಲಾಯಿತು. ಶ್ರೀರಂಗಪಟ್ಟಣ, ಪಾಂಡವಪುರ, ಕೆ.ಆರ್ ಪೇಟೆ, ನಾಗಮಂಗಲ, ಮಳವಳ್ಳಿ, ಮಂಡ್ಯ ತಾಲೂಕುಗಳಿಗೆ ಗಂಗಾಜಲ ಕ್ಯಾನ್ ಗಳನ್ನು ವಿತರಿಸಲಾಯಿತು.

ಡಿಸಿ ಕಚೇರಿ ಆವರಣದಲ್ಲಿ ಪವಿತ್ರ ಗಂಗಾಜಲವನ್ನು ವಿತರಣೆ ಮಾಡಿ  ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್ ನಾಗಾರಾಜು, ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಎಲ್ಲ ಶಿವನ  ದೇವಾಲಯಗಳಲ್ಲಿ ಪವಿತ್ರ ಗಂಗಾಜಲದಿಂದ ಶಿವನಿಗೆ ಅಭಿಷೇಕ ಮಾಡಾಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿ ತಾಲೂಕಿಗೆ ಐದು ಗಂಗಾಜಲ ಕ್ಯಾನ್ ಗಳನ್ನು ತಹಸೀಲ್ದಾರ್ ರವರ ಸಮಕ್ಷಮದಲ್ಲಿ ವಿತರಣೆ ಮಾಡಿದ್ದೇವೆ. ಗಂಗಾಜಲವನ್ನು ಶಿವನ ಭಕ್ತರಿಗೆ ಪ್ರಸಾದ ರೂಪದಲ್ಲಿ ಕೊಡಲಾಗುವುದು ಎಂದರು.

ಉಪವಿಭಾಗಧಿಕಾರಿ ಎಸ್.ಎಚ್.ಕೀರ್ತನ, ತಹಶೀಲ್ದಾರ್ ಕುಂಞ ಅಹಮ್ಮದ್, ಧಾರ್ಮಿಕ ದತ್ತಿ ತಹಸೀಲ್ದಾರ್ ಎಂ.ಉಮಾ, ಕಾರ್ಯನಿರ್ವಾಹಕ ಅಧಿಕಾರಿ ಮಂಜೇಶ್, ರಮ್ಯಕೃಷ್ಣ ಇದ್ದರು.