ನರಸಿಂಹ ನಾಯಕ್ ಬೈಂದೂರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಸಮೀಪದ ಗಂಗೆಬಾಗಿಲು ಸೇತುವೆ ಎಂಬ ಹೆಗ್ಗಳಿಕೆ ಪಡೆದಿರುವ 50 ವರ್ಷ ಹಳೆಯ ಕಿರುಸೇತುವೆ ಸಂಪೂರ್ಣ ಕುಸಿದು ಹಳ್ಳ ಹಿಡಿದಿದೆ. ಕಳೆದ ಕೆಲವು ವರ್ಷಗಳಿಂದ ನಿರಂತರ ಮಳೆ, ಪ್ರವಾಹ ಹಾಗೂ ನಿರ್ಲಕ್ಷ್ಯದಿಂದ ಸೇತುವೆಯ ಕಂಬಗಳು ಕುಗ್ಗಿದ್ದು, ಮೇಲ್ಮೈನ ಕಾಂಕ್ರೀಟ್ ಭಾಗದಲ್ಲಿ ಬಿರುಕು ಕಾಣಿಸಿಕೊಂಡಿವೆ. ಕಬ್ಬಿಣದ ರಾಡ್‌ಗಳು ಹೊರಗೆದ್ದು ತುಕ್ಕು ಹಿಡಿದಿವೆ. ಈ ಪರಿಸರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರೇ ಹೆಚ್ಚು ವಾಸುಸಿತ್ತಿದ್ದಾರೆ. ದೇವಸ್ಥಾನ ಮತ್ತು ಪೇಟೆಯನ್ನು ಸಂಪರ್ಕಿಸಲು ಈ ಕಿರುಸೇತುವೆಯನ್ನು ಬಳಸುತ್ತಾರೆ. ಮಳೆಗಾಲದಲ್ಲಿ ಹೆಚ್ಚಿನ ನೀರು ಬಂದಾಗ ಸೇತುವೆ ಮತ್ತಷ್ಟು ಹಾನಿಗೊಳಗಾಗುವ ಸಾಧ್ಯತೆಯಿದೆ. ಹೊಸ ಸೇತುವೆ ನಿರ್ಮಿಸಬೇಕೆಂದು ಪಂಚಾಯಿತಿ ಹಾಗೂ ಸಂಬಂಧಪಟ್ಟ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಸೇತುವೆ ಕುಸಿದು ದೊಡ್ಡ ಅಪಾಯ ಸಂಭವಿಸುವ ಭೀತಿಯಿದೆ ಎಂದು ಆತಂಕ ವ್ಯಕ್ತಪಡಿಸಿರುವ ಗ್ರಾಮಸ್ಥರು, ಸರ್ಕಾರ ಮತ್ತು ಸ್ಥಳೀಯ ಆಡಳಿತ ಕೂಡಲೇ ಸೇತುವೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸುಬ್ಬರಸನ ತೊಪ್ಲು, ಸಲಗೇರಿ, ನುಕ್ಸಾಲು ಸೇರಿದಂತೆ ಸುವಾರು 170ಕ್ಕೂ ಅಧಿಕ ಕುಟುಂಬಗಳು ಈ ಪರಿಸರದಲ್ಲಿ ವಾಸವಿದ್ದು, 60ಕ್ಕೂ ಹೆಚ್ಚು ಮಕ್ಕಳು ಪ್ರತಿನಿತ್ಯ ಶಾಲೆ, ಕಾಲೇಜಿಗೆ ಹೋಗುತ್ತಾರೆ ದೇವಸ್ಥಾನಕ್ಕೆ ಹೋಗುವ ಭಕ್ತರು, ಸ್ಥಳೀಯರು, ಕಾಲ್ನಡಿಗೆಯಲ್ಲಿ ಬರುವ ಜನರಿಗೆ ಪೇಟೆಗೆ ಬರಲು ಈ ಕಿರುಸೇತುವೆಯೇ ಸಮೀಪದ ವಾರ್ಗವಾಗಿದೆ. ಆದರೆ ಈಗ ಈ ಸೇತುವೆ ಮೇಲೆ ಸಂಚರಿಸುವುದು ಅಪಾಯಕಾರಿಯಾಗಿದೆ.
ಕೊಲ್ಲೂರು ಗಂಗೆಬಾಗಿಲು ಸೇತುವೆ 50 ವರ್ಷ ಹಳೆಯದಾಗಿದ್ದು, ಶಿಥಿಲಾವಸ್ಥೆಗೆ ತಲುಪಿದೆ. ಸಾರ್ವಜನಿಕರ ಜೀವಕ್ಕೆ ಅಪಾಯಕಾರಿಯಾಗಿದೆ. ತಕ್ಷಣವೇ ಹೊಸ ಸೇತುವೆ ನಿರ್ಮಿಸಲು ಜನಪ್ರತಿನಿಧಿಗಳು, ಸರ್ಕಾರ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ತುರ್ತು ಪರಿಶೀಲಿಸಿ ಶಾಶ್ವತ ಪರಿಹಾರ ಒದಗಿಸಬೇಕು. -ವಿನಾಯಕ ಆಚಾರ್ಯ, ಕೊಲ್ಲೂರು ನಿವಾಸಿ ಪ್ರತಿದಿನ ಮಕ್ಕಳನ್ನು ಕರೆದುಕೊಂಡು ಈ ಸೇತುವೆ ದಾಟಿ ಶಾಲೆಗೆ ಹೋಗಬೇಕಾಗಿದೆ. ಸೇತುವೆ ಕೆಳಗೆ ನೀರು ಜೋರಾಗಿ ಹರಿಯುತ್ತಿದ್ದು, ಕಂಬಗಳು ಕಂಪಿಸುತ್ತಿವೆ. ಮಳೆಗಾಲದಲ್ಲಿ ಪರಿಸ್ಥಿತಿ ಇನ್ನಷ್ಟು ಶೋಚನೀಯ. ಸೇತುವೆ ಮೇಲೆ ಬಿರುಕುಗಳು ಕಾಣಿಸುತ್ತವೆ. ಹೊಸ ಸೇತುವೆ ಬೇಡಿಕೆ ಇನ್ನೂ ಈಡೇರಿಲ್ಲ. -ಗ್ರೀಷ್ಮಾ ಭಿಡೆ, ಗೃಹಿಣಿ ಕೊಲ್ಲೂರು