ಕಾನಹೊಸಹಳ್ಳಿ: ದೈವತ್ವ ಪಡೆದಿರುವ ಮ್ಯಾಸಬೇಡ ಸಾಂಸ್ಕೃತಿಕ ಆರಾಧ್ಯ ವೀರರಾದ ಕಂಪಳ ರಂಗಸ್ವಾಮಿ, ಸೂರ್ಯಪಾಪ ನಾಯಕ ಗ್ರಾದಿ ದೇವರು, ಜೋಗಿದೇವರು, ದಡ್ಡಿ ಸೂರ್ಯನಾಯಕ ದೇವರು ಮತ್ತು ದೇವರ ಎತ್ತುಗಳೊಂದಿಗೆ ಭಕ್ತರು ಪಾಲು ಪೋತಲಗುಡ್ಡ ಹತ್ತಿರದ ಹಳ್ಳಕ್ಕೆ ಪಾದಯಾತ್ರೆ ತೆರಳಿ ಶನಿವಾರ ಬೆಳಗ್ಗೆ ಬುಡಕಟ್ಟು ಸಂಸ್ಕೃತಿಯಂತೆ ಗಂಗೆಪೂಜೆ ನೆರವೇರಿಸಿದರು.
ಇದನ್ನೂ ಓದಿ:ಅರ್ಧ ತುಂಬಿದ ಹುಲಿಕೆರೆಗೆ ಗಂಗೆಪೂಜೆ
ದೇವರಹಟ್ಟಿಯಲ್ಲಿ ಹಲವು ವರ್ಷಗಳ ನಂತರ ಈ ಆಚರಣೆ ಮಾಡಲಾಗುತ್ತಿದ್ದು, ದೇವರ ಎತ್ತುಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ಶುಕ್ರವಾರ ಎಲ್ಲ ದೇವರ ಛತ್ರಿ, ಚಾಮರ, ಉರುಮೆ ವಾದ್ಯದೊಂದಿಗೆ ಭಕ್ತರು ಪಾಲ ಪೋತಲಗುಡ್ಡದ ಬಳಿಯ ಹಳ್ಳಕ್ಕೆ ತೆರಳಿ ಪೂಜೆ ನೆರವೇರಿಸಿದರು.
ಇದಕ್ಕೂ ಮೊದಲು ಕಂಬಳಿ ಗದ್ದಿಗೆ ಹಾಕಿ ಕಾಸುಮೀಸಲು ಅರ್ಪಿಸಿದರು. ತಿಮ್ಮನಹಳ್ಳಿ, ಚಿರತುಗುಂಡು ಮಾರ್ಗವಾಗಿ ಮೊಳಕಾಲ್ಮೂರು ತಾಲೂಕಿನ ಕಂಪಳದೇವರಹಟ್ಟಿಯ (ಚಿಕ್ಕುಂತಿ) ಮೂಲ ದೇವಸ್ಥಾನಕ್ಕೆ ಭಾನುವಾರ ತೆರಳಲಿದ್ದಾರೆ. ಪಾದಯಾತ್ರೆಯಲ್ಲಿ ಬೇಡ ಬುಡಕಟ್ಟು ಮಹಿಳೆಯರ ಸಾಂಸ್ಕೃತಿಕ ವೀರರ ವರ್ಣನೆ ಕಥನ, ಕಾವ್ಯ ಮತ್ತು ಸೋಭಾನೆ ಪದಗಳನ್ನು ಹಾಡುತ್ತಾ ಸಾಗುವುದು ವಿಶೇಷ.
ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್, ಸಂಡೂರು ಶಾಸಕಿ ಅನ್ನಪೂರ್ಣಾ ತುಕಾರಾಮ್, ರಾಜ್ಯ ದ್ರಾಕ್ಷಿರಸ ನಿಗಮ ಮಂಡಳಿ ಅಧ್ಯಕ್ಷ ಡಾ.ಯೋಗೀಶ್ ಬಾಬು, ಭಕ್ತರು ಇದ್ದರು.