ಜಿಲ್ಲೆ

ಆಂಜನೇಯ ದೇವಸ್ಥಾನ ರಾಜಗೋಪುರ ಲೋಕಾರ್ಪಣೆ

Davangere - Desk - Ganesh M K

ಹೊನ್ನಾಳಿ: ತಾಲೂಕಿನ ಕುಂಬಳೂರು ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದ ರಾಜಗೋಪುರ ಲೋಕಾರ್ಪಣೆ, ಕಳಸಾರೋಹಣ, ದೀಪಸ್ತಂಭ ಮತ್ತು ಬನ್ನಿಮಹಾಂಕಾಳಿ, ಗುಳ್ಳಮ್ಮ ದೇವಿ ಪ್ರಾಣ ಪ್ರತಿಷ್ಠಾಪನೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಶುಕ್ರವಾರ ನಸುಕಿನಿಂದ ಮಧ್ಯಾಹ್ನದವರೆಗೆ ಭಕ್ತರ ಸಮ್ಮುಖದಲ್ಲಿ ನಡೆದವು.

ಗುರುವಾರ ಮಹಿಳೆಯರಿಂದ ಗಂಗಾಪೂಜೆ ನಡೆಯಿತು. ಕುಂಬಳೂರು, ಕುಂದೂರು, ಕಮ್ಮಾರಗಟ್ಟೆ ಆಂಜನೇಯ ದೇವರು, ಕೂಲಂಬಿಯ ಮಾರಮ್ಮ ದೇವರ ಮೆರವಣಿಗೆ ನಡೆಯಿತು.

ಬೆಳಗ್ಗೆ 10.21ಕ್ಕೆ ಬನ್ನಿ ಮಹಾಂಕಾಳಿ ದೇವಿ ಶಿಲಾಮೂರ್ತಿ ಪ್ರತಿಷ್ಠಾಪನೆ ಮತ್ತು ಪವಮಾನ ಸೂಕ್ತ ಹೋಮ, ಪೂರಕ ಸುದರ್ಶನ ಹೋಮ ಹಿರೇಕಲಕ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶ್ರೀಗಳ ಸಮ್ಮ್ಮುಖದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶ್ರೀಗಳು, ದೇವಸ್ಥಾನಗಳ ಪ್ರತಿಷ್ಠಾಪನೆ ಮಾಡುವುದು ಭಕ್ತರ ಮನಃಶಾಂತಿಗಾಗಿ. ಅಂತಹ ಸ್ಥಳಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು ಹಾಗೂ ದೇವಸ್ಥಾನಗಳ ಮುಖಾಂತರ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದರು.

ಕುಂಬಳೂರು ಗ್ರಾಮದಲ್ಲಿ ಕಳಸಾರೋಹಣದ ಸಮಯಕ್ಕೆ ಸರಿಯಾಗಿ ತುಂತುರು ಮಳೆ ಸುರಿಯಿತು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ, ವಿಪ ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್, ಮಾಜಿ ಶಾಸಕ ಡಾ.ಡಿ.ಬಿ. ಗಂಗಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು.

ಗ್ರಾಮದ ಪ್ರಮುಖರಾದ ಅಂಗಡಿ ರಾಜಣ್ಣ, ವಾಗೀಶ್, ವರದರಾಜು, ಎನ್.ಎಚ್. ಕೃಷ್ಣಪ್ಪ, ಪ್ರಕಾಶ್, ಸುಧಾಕರ್, ಗ್ರಾಪಂ ಮಾಜಿ ಅಧ್ಯಕ್ಷ ಅಣ್ಣಪ್ಪ, ಅರ್ಚಕ ರಾಮಾನುಜಾಚಾರ್ಯ, ಅಂಗಡಿ ನಾಗರಾಜ್, ಕೃಷ್ಣಪ್ಪ, ಲಕ್ಷ್ಮೀಪತಿ, ಗ್ರಾಪಂ ಮಾಜಿ ಅಧ್ಯಕ್ಷ ವಿಕಾಸ್ ಇತರರು ಇದ್ದರು.