ಗುಳೇದಗುಡ್ಡ ಪುರಸಭೆ ವತಿಯಿಂದ ಅಮೃತ ಯೋಜನೆಯಡಿ ಗುಳೇದಗುಡ್ಡ ತಾಂಡಾದ ಮನೆ ಮನೆಗಳಿಗೆ ನೀರು ಪೂರೈಕೆ ಯೋಜನೆ ಶನಿವಾರ ಪ್ರಾರಂಭಿಸಲಾಯಿತು. 
ಜಿಲ್ಲೆ

ಮನೆ ಮನೆಗೆ ಯುಗಾದಿಗೆ ಬಂದಳು ಗಂಗೆ

ಗುಳೇದಗುಡ್ಡ: ಕಳೆದ 13 ವರ್ಷಗಳಿಂದ ನೀರಿಗಾಗಿ ನಿತ್ಯ ಪರದಾಡುತ್ತಿದ್ದ ಗುಳೇದಗುಡ್ಡ ತಾಂಡಾದ 60 ಮನೆಗಳಿಗೆ ಅಮೃತ ಯೋಜನೆ ಅಡಿ ಪುರಸಭೆಯಿಂದ ನೀರು ಪೂರೈಸಲಾಯಿತು.

ಸುಮಾರು 600 ರಿಂದ 700 ಜನಸಂಖ್ಯೆ ಹೊಂದಿರುವ ಗುಳೇದಗುಡ್ಡ ಪಟ್ಟಣದ ಹೊರವಲಯದಲ್ಲಿ ಸ್ಥಳಾಂತರಗೊಂಡ ಗುಳೇದಗುಡ್ಡ ತಾಂಡಾಕ್ಕೆ ಮೂಲಸೌಕರ್ಯ ಕೊರತೆ ಇತ್ತು. ಇಲ್ಲಿನ ನಿವಾಸಿಗಳಿಗೆ ನೀರು ಪೂರೈಸಲು ಓವರ್‌ಹೆಡ್ ಟ್ಯಾಂಕ್ ನಿರ್ಮಿಸಲಾಗಿತ್ತಾದರೂ ಅದಕ್ಕೆ ನೀರಿನ ಸಂಪರ್ಕ ಇರಲಿಲ್ಲ. ಹೀಗಾಗಿ ಗುಳೇದಗುಡ್ಡಕ್ಕೆ ನೀರು ಪೂರೈಸುವ ಜಾಕ್‌ವೆಲ್‌ನಿಂದ ಸೋರಕೆಯಾದ ನೀರು ಪಡೆಯುತ್ತಿದ್ದರು.

ಶಾಸಕ ಬಿ.ಬಿ. ಚಿಮ್ಮನಕಟ್ಟಿ, ಪುರಸಭೆಯ ಸಹಕಾರದಿಂದ ಕಳೆದ 13 ವರ್ಷಗಳಿಂದ ನೀರಿನ ತೊಂದರೆ ಅನುಭವಿಸುತ್ತಿದ್ದ ತಾಂಡಾ ಜನತೆಗೆ ಯುಗಾದಿಯ ಶುಭದಿನದಂದು ನೀರು ಪೂರೈಕೆಯಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಅಸ್ಲಂ ಮುಜಾವರ ಮಾಹಿತಿ ನೀಡಿದರು.

ಇಲ್ಲಿ ಒಂದು ಸಾರ್ವಜನಿಕ ನಳ ಇತ್ತು. ಆದ್ರ ಸರಿಯಾಗಿ ನೀರು ಬರ್ತಿರಲಿಲ್ಲ. ಈಗ ನೀರು ಕೊಟ್ಟ ಶಾಸಕರಿಗೆ, ಪುರಸಭೆ ಅಧಿಕಾರಿಗಳಿಗೆ, ಸದಸ್ಯರಿಗೆ ಸ್ಥಳೀಯರಾದ ಭೀಮಸಿಂಗ್ ರಾಠೋಡ, ಅರ್ಜುನ ಲಮಾಣಿ, ಸಾವಿತ್ರಿ ರಾಠೋಡ, ಮುತ್ತು ನಾಯಕ, ಮೇಘಪ್ಪ ಚವ್ಹಾಣ, ಪರಶುರಾಮ ರಾಠೋಡ ಧನ್ಯವಾದ ಅರ್ಪಿಸಿದರು.

ನಸಿಕಿನ ನಾಲ್ಕು, ಐದು ಗಂಟೆಗೆ ಎದ್ದು ಬಂಡಿ ತೆಗೆದುಕೊಂಡು ನೀರು ತರಲು ಹೋಗುತ್ತಿದ್ದೇವೆ. ಬಹಳ ಅಂದ್ರ ಬಹಳ ತ್ರಾಸ ಇತ್ತು. 12-13 ವರ್ಷದಿಂದ ಕೊಡಾ ತಗೊಂಡು ಓಡಾಡುತ್ತಿದ್ದೆವು. ಇವತ್ತು ಮುನಸಿಪಾಲ್ಟಿಯವರು ಯುಗಾದಿ ಗಿಫ್ಟ್ ಅಂತ ನಮ್ಮ ಮನಿಗೆ ನೀರು ಹರಿಸಿದ್ದಾರೆ. - ಸುಶೀಲಾ ಲಮಾಣಿ, ತಾಂಡಾ ನಿವಾಸಿ